ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿಗೊಳಪಟ್ಟ ಶೇಣಿ ಎಂಬ ಪುಟ್ಟ ನಾಡನ್ನು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುನ್ನಡೆಸಿ ಉನ್ನತ ಶ್ರೇಣಿಗೇರುವಂತೆ ಶ್ರಮಿಸುವಲ್ಲಿ ಕಾರಣೀಭೂತರಾಗಿರುವ ತೋಟದ ಮನೆ ಎಂಬ ಮನೆತನದಿಂದ ಸಮಾಜಮುಖಿ ದಿಸೆಯಲ್ಲಿ ಬೆಳೆದು ಬಂದವರಾಗಿದ್ದಾರೆ ಸೋಮಶೇಖರ್ ಜೆ.ಎಸ್. ಎಂಬ ಸ್ಪುರದ್ರೂಪಿ ಯುವಕ.
ಶತಮಾನದ ಚರಿತ್ರೆಗಳಲ್ಲಿ ಉಲ್ಲೇಖಿಸಲ್ಪಟ್ಟ ಈ ಮನೆತನಕ್ಕೊಳಪಟ್ಟ
ದಿವಂಗತ ಜನಾರ್ಧನ ನಾಯಕ್ (ಶೇಣಿ ಶಾಲಾ ಮುಖ್ಯೋಪಾಧ್ಯಯರು) -
ಶಾರದ ವೈ (ಶೇಣಿ ಪ್ರೌಢ ಶಾಲಾ ನಿವೃತ್ತ ಮುುಖ್ಯೋಪಾಧ್ಯಯಿನಿ) ದಂಪತಿಗಳ ದ್ವಿತೀಯ ಪುತ್ರರಾಗಿ 1978 ಡಿಸೆಂಬರ್ 31ರಂದು ಜನಿಸಿದರು.
ಇವರ ಅಣ್ಣ ರಾಧಕೃಷ್ಣ ನಾಯಕ್ ಅಕ್ಕ ಚೇತನ ಚಿಕ್ಕ ಸಂತುಷ್ಠ ಕುಟುಂಬದಲ್ಲಿ ಜನಿಸಿದ ಸೋಮಶೇಖರ್ ಶ್ರೀಶಾರದಾಂಬ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪೂರೈಸಿ ನೆರೆಯ ಕರ್ನಾಟಕ ರಾಜ್ಯದ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲದಲ್ಲಿ ಪದವಿ ವ್ಯಾಸಂಗಗೈದರು.
ನಾಯಕತ್ವ ಹಾಗೂ ರಾಜಕೀಯ ಆಸಕ್ತಿ :
ಸ್ವಾತಂತ್ರ್ಯ ಭಾರತವನ್ನು ಮುನ್ನಡೆಸುವ ರಾಜಕೀಯ ಶಕ್ತಿಯಾದ ಇಂಡಿಯನ್ ನೇಶನಲ್ ಕಾಂಗ್ರೆಸ್ಸಿನ ಅಪ್ಪಟ ಅಭಿಮಾನಿಯಾಗಿದ್ದ ಸೋಮಶೇಖರ್ ಅವರು ತಮ್ಮ ಕುಟುಂಬ ಪರಂಪರೆಯಿಂದ ಬೆಳೆದು ಬಂದ ಪಕ್ಷ ನಿಷ್ಠ ಸಿದ್ಧಾಂತಗಳಿಗೆ ಬದ್ಧರಾಗಿ ರಾಜಕೀಯಾತ್ಮಕ ಆಸಕ್ತಿ ಬೆಳೆಸಿಕೊಂಡು ಮುಖ್ಯಧಾರೆಗೆ ಮುನ್ನಡಿ ಇಟ್ಟವರು. ತನ್ನ ಶೈಕ್ಷಣಿಕ ಸಂದರ್ಭದಲ್ಲಿಯೇ ವಿದ್ಯಾರ್ಥಿ ನಾಯಕರಾಗಿ ಆಯ್ಕೆಯಾಗಿದ್ದ ಇವರು ಎಸ್ಸಸೆಲ್ಸಿ ಸಂದರ್ಭ ಸ್ಕೂಲ್ ಪೀಪಲ್ ಲೀಡರ್ (ಎಸ್ ಪಿ ಎಲ್) ಆಗಿ ಬಳಿಕ ಪಿಯುಸಿ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷರಾಗಿ, ಡಿಗ್ರಿ ಕಾಲೇಜು ಯೂನಿಯನ್ ಅಧ್ಯಕ್ಷರಾಗಿ ಬಳಿಕ ಮಂಗಳೂರು ವಿಶ್ವ ವಿದ್ಯಾನಿಲಯ ಸರ್ವ ಕಾಲೇಜು ವಿದ್ಯಾರ್ಥಿ ಆಸೋಶಿಯೇಷನ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡು ಬಾಲ್ಯ ಕಾಲದ ನಾಯಕತ್ವವನ್ನು ಮೈಗೂಡಿಸಿಕೊಂಡು ಬೆಳೆಯುವಲ್ಲಿ ಸಾಕ್ಷಿಯಾದವರು. 1995-96ರಲ್ಲಿ ಪ್ರಪ್ರಥಮ ಬಾರಿಗೆ ವಿಟ್ಲ ಕಾಲೇಜಿನಲ್ಲಿ ಎನ್ ಎಸ್ ಯು ಘಟಕ ಸ್ಥಾಪಿಸಿ ವಿದ್ಯಾರ್ಥಿ ಸಂಘಟನೆಗಳಿಗೆ ನೇತೃತ್ವವಹಿಸಿದವರು. ಎನ್ ಎಸ್ ಯು ವಿಟ್ಲ ಬ್ಲೋಕ್ ಅಧ್ಯಕ್ಷರಾಗಿ ವಿದ್ಯಾರ್ಥಿಗಳ ನಡುವೆ ಸಂಘಟನಾತ್ಮಕ ಬಾಂಧವ್ಯವನ್ನು ಬೆಸೆಯಲು ಕ್ರಿಯಾಶೀಲರಾದರು.ಆಗ ವಿದ್ಯಾರ್ಥಿ ಯೂನಿಯನ್ ಜಿಲ್ಲಾಧ್ಯಕ್ಷರಾಗಿದ್ದ ಯು.ಟಿ.ಖಾದರ್ ಹಾಗೂ ರಾಜಕೀಯ ಪಕ್ಷದ ಉನ್ನತ ನೇತಾರರಾಗಿದ್ದ ವಿನಯ ಕುಮಾರ್ ಸೊರಕೆ,ರಮಾನಾಥ ರೈ,ಎಂ.ಎಸ್.ಮೊಹಮ್ಮದ್ ಮೊದಲಾದವರ ಒಡನಾಟಕ್ಕೆ ಪಾತ್ರರಾಗಿದ್ದರು.
ಉತ್ತಮ ರಂಗ ನಟ
ಸಾಮಾಜಿಕ ಸೇವಾ ಆಸಕ್ತಿಯಲ್ಲದೆ ತನ್ನ ಶಾಲಾ ಕಾಲೇಜು ದಿನಗಳಲ್ಲಿ ರಂಗಾಭಿನಯದ ಬಗ್ಗೆ ಅಭಿರುಚಿ ಬೆಳೆಸಿಕೊಂಡಿದ್ದ ಸೋಮಶೇಖರ್ ಅವರು ಉತ್ತಮ ರಂಗ ನಟರಾಗಿಯೂ ಗುರುತಿಸಿಕೊಂಡಿದ್ದರು. ಶಾಲೆಯ ಕಲೋತ್ಸವ,ವಾರ್ಷಿಕೋತ್ಸವ,ಕ್ಲಬ್ ಸಂಘಟನೆಗಳ ವಾರ್ಷಿಕೋತ್ಸವದ ಸಂದರ್ಭಗಳಲೆಲ್ಲಾ ಮುಖಕ್ಕೆ ಬಣ್ಣ ಹಚ್ಚಿ ರಂಗ ಏರಿ ತನ್ನ ಅಭಿನಯ ಚಾತುರ್ಯತೆಯನ್ನು ತೋರ್ಪಡಿಸುವ ಇವರು ತಮ್ಮ ಒಡನಾಡಿಗಳನ್ನು,ಸಮಾನ ಮನಸ್ಕರನ್ನು ಸಂಘಟಿಸಿ ಅಂದು ವರ್ಷಂಪ್ರತಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸವಲ್ಲಿಯೂ ಮುಂದಾಳುತ್ವವಹಿಸುತ್ತಿದ್ದರು ಎಂಬುದು ಇವರೊಳಗೆ ಅಡಗಿದ ಕಲಾಸಕ್ತಿಗೊಂದು ನಿದರ್ಶನವಾಗಿದೆ.
*ಕಿರು ಪ್ರಾಯದಲ್ಲಿಯೇ ಹಿರಿದಾದ ಹುದ್ದೆ* :
ಕಾಂಗ್ರೆಸ್ ಪಕ್ಷ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಾ ಬೆಳೆದು ಬಂದ ಸೋಮಶೇಖರ್ ಅವರ ಕ್ರಿಯಾಶೀಲತೆಯನ್ನು ಗುರುತಿಸಿ 26ನೇ ವರ್ಷದ ಕಿರು ಪ್ರಾಯದಲ್ಲಿಯೇ ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಸಮಿತಿ 2005ರಲ್ಲಿ ಚುನಾಯಿತ ಜಿಲ್ಲಾ ಸಮಿತಿ ಸದಸ್ಯನನ್ನಾಗಿ ತನ್ನ ತೆಕ್ಕೆಗೆ ಸೇರಿಸಿಕೊಂಡು ಪಕ್ಷ ಬೆಳವಣಿಗೆಯ ಜವಾಬ್ದಾರಿ ಹೊರಿಸಿತ್ತು. ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪಕ್ಷ ಚಟುವಟಿಕೆಗಳಲ್ಲಿ ಸಕ್ರಿಯರಾದ ಸೋಮಶೇಖರ್ ಅವರು ಹಂತಾನುಹಂತವಾಗಿ ಪಕ್ಷ ನಿಷ್ಠರಾಗಿ ಬಲಿಷ್ಠರಾಗಲು ಹಾಗೂ ಕರ್ತವ್ಯ ಬದ್ಧತೆಯನ್ನು ಬೆಳೆಸಿಕೊಂಡ ಕಾರಣ ಯುವ ಪೀಳಿಗೆಯ ನಾಯಕರಲ್ಲಿ ಅಗ್ರಮಾನ್ಯ ಸ್ಥಾನಕ್ಕೆ ತಲುಪಲು ಕಾರಣಕರ್ತರಾದರು. ಯೂತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಈ ಸಂದರ್ಭದಲ್ಲಿ ಇವರು ಸಹಜವಾಗಿಯೇ ನಾಮ ನಿರ್ದೇಶಿತರಾಗಿ ಜವಾಬ್ದಾರಿಯನ್ನು ಹೊತ್ತುಕೊಂಡರು.
ಹಿರಿಯರಿಗೂ ಕಿರಿಯರಿಗೂ ಪ್ರೀತಿ ಪಾತ್ರ “ಸೋಮಣ್ಣ”*
ಯುವ ಜನಾಂಗದ ಕಣ್ಮಣಿಯಾಗಿದ್ದ ಸೋಮಶೇಖರ್ ಅವರು ಕಿರಿಯರ ಅಭಿಮಾನಕ್ಕೆ ಬಾಜನರಾಗಿ ಹಾಗೂ ಹಿರಿಯರ ಪ್ರೀತಿಗೆ ಪಾತ್ರರಾಗಿ "ಸೋಮಣ್ಣ" ಎಂಬ ನಾಮಧೇಯದಲ್ಲಿ ಸಾಮಾಜಿಕ ರಂಗದಲ್ಲಿ ಚಿರಪರಿತರಾದರು. ಇವರ ಸಾಮಾಜಿಕ ದೂರದೃಷ್ಠಿತ್ವದ ಚಿಂತನೆ, ನಾಡಿನ ಅಭಿವೃದ್ಧಿಪರ ತುಡಿತಗಳನ್ನು ಕಂಡ ನಾಡಿನ ಜನತೆ ಗ್ರಾಮ ಪಂಚಾಯತು ಚುನಾವಣೆಯಲ್ಲಿ ಸ್ಪರ್ಧಿಸಿ ಅ ಮೂಲಕ ಜನತಾ ಸೇವೆಗಿಳಿಯುವಂತೆ ಪ್ರೋತ್ಸಾಹಿಸಿದ ಪರಿಣಾಮ 2010ರಲ್ಲಿ ಪ್ರಪ್ರಥಮ ಬಾರಿಗೆ ಎಣ್ಮಕಜೆ ಗ್ರಾಮ ಪಂಚಾಯತಿನ ಶೇಣಿ ವಾರ್ಡಿನಿಂದ ಚುನಾವಣೆಗೆ ಸ್ಪರ್ಧಿಸಿರುವುದಲ್ಲದೆ ಅತ್ಯಧಿಕ ಮತ ಗಳಿಸಿ ಪಂಚಾಯತು ಅಧ್ಯಕ್ಷ ಸ್ಥಾನಕ್ಕೂ ಆಯ್ಕೆಯಾಗಿ ಪ್ರಚಂಡತೆಯನ್ನು ಮೆರೆದರು.
ಕೋಮು ಸೌಹರ್ಧತೆಯ ಹರಿಕಾರ :
ಎಣ್ಮಕಜೆ ಗ್ರಾಮ ಪಂಚಾಯತಿಗೆ ಪೆರ್ಲ ಪೇಟೆ ಎಂಬುದು ಮುಖ್ಯ ನಗರ ಪ್ರದೇಶ.ಅ ಸಂದರ್ಭದಲ್ಲೆಲ್ಲಾ ಸದಾ ವರ್ಗೀಯ ಕಲಾಪ,ರಾಜಕೀಯ ಸಂಘರ್ಷಗಳಿಗೆ ಹೆಸರುವಾಸಿಯಾಗಿ ಅಗಾಗ ಇಂತಹ ಘಟನೆಗಳು ಜರಗುತ್ತಾ ನಾಡಿನ ಶಾಂತಿ ನಾಶವಾಗಿದ್ದ ಸಂಧರ್ಭದಲ್ಲಿ ಗ್ರಾಮ ಪಂಚಾಯತು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸೋಮಶೇಖರ್ ಅವರು ಊರಿನ ನಿದ್ದೆಗೆಡಿಸುವ ಮತೀಯ ಸಂಘರ್ಷಗಳಿಗೆ ತೆರೆ ಎಳೆಯಲು ಮುಂದಾದರು. ಎಲ್ಲಾ ಪಕ್ಷ ಸಂಘಟನೆಗಳನ್ನು ಸಂಘಟಿಸಿಕೊಂಡು ಕಾನೂನು ಪಾಳಕರ ಸಹಕಾರದಿಂದ ಸೌಹರ್ದಯುಕ್ತ ನೀತಿಯ ವಾತವರಣ ರೂಫಿಸುವಲ್ಲಿ ಮುಖ್ಯ ಮುತುವರ್ಜಿ ವಹಿಸಿದರು. ಪರಿಣಾಮ ಪೆರ್ಲ ಪೇಟೆಯ ಸುತ್ತಮುತ್ತ ಆಗಾಗ ಘಟಿಸುತ್ತಿದ್ದ ಮತೀಯ,ರಾಜಕೀಯ ವಿದ್ವೇಷ ಕೃತ್ಯಗಳು ಕಾನೂನುನಾತ್ಮಕವಾಗಿ ಹತ್ತಿಕ್ಕುವಲ್ಲಿಯೂ ನಾಡಿನ ಶಾಂತಿ ಸುವ್ಯವಸ್ಥತೆ ಪುನಃ ಸ್ಥಾಪಿಸುವಲ್ಲಿ ಕಾರಣ ಕರ್ತರಾದರು.
ಅಭಿವೃದ್ಧಿಗೆ ಅನ್ವರ್ಥವಾದ ಅಧ್ಯಕ್ಷ ಪಟ್ಟ :
ನಾಲ್ದೆಸೆಗಳಿಂದಲೂ ಕುಗ್ರಾಮವಾಗಿದ್ದ ಎಣ್ಮಕಜೆ ಗ್ರಾಮ ಪಂಚಾಯತಿನ ಜನತೆ ಸೋಮಶೇಖರ್ ಅಧ್ಯಕ್ಷ ಪದವಿಗೇರಿದಾಗ ಇವರಲ್ಲಿ ನಾಡಿನ ಅಭಿವೃದ್ಧಿಯ ಕನಸು ಕಂಡಿದ್ದರು.
ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸುವ ವಿಶ್ವಾಸ ಬೆಳೆಸಿಕೊಂಡ ಇವರು ಆಡಳಿತದ ಚುಕ್ಕಾಣಿ ಹಿಡಿದು ಸಮರ್ಪಣಾ ಭಾವದಿಂದ ಅವಿರತ ಶ್ರಮ ವಹಿಸಿ ದುಡಿದ ಪರಿಣಾಮ ಸಂಸದರ,ಶಾಸಕರ, ಜಿಲ್ಲಾ ಪಂಚಾಯತು, ಬ್ಲೋಕ್ ಪಂಚಾಯತಿನ ಹಲವು ಸೌಲಭ್ಯಗಳು,ರಾಜ್ಯ ಹಾಗೂ ಕೇಂದ್ರ ಸರಕಾರದ ಸವಲತ್ತುಗಳು ಇವರ ಪಂಚಾಯತ್ ಆಡಳಿತದ ಸಂದರ್ಭದಲ್ಲಿ ರಾಜಕೀಯಾತೀತವಾಗಿ ಜನತೆಯತ್ತ ಮುಖ ಮಾಡುವಂತಾಯಿತು.
ಎಂಡೋಸಲ್ಫನ್ ಸಮಸ್ಯೆ ವಸತಿ ರಹಿತರಿಗೆ ಭವನ ನಿರ್ಮಾಣ,ವಿದ್ಯುತ್ ಸಂಪರ್ಕವಿಲ್ಲದೆಡೆಗೆ ವಿದ್ಯುತ್ ಸೌಲಭ್ಯ,ಕುಡಿನೀರು,ಶೌಚಾಲಯ ದಂತಹ ಮೂಲಭೂತವಾದ ಜನಪರ ಸೌಲಭ್ಯಗಳಲ್ಲದೆ ಪೆರ್ಲ ಪೇಟೆಯ ಸರ್ವತೋಮುಖ ಅಭಿವೃದ್ಧಿಗೆ ರೂಪುರೇಖೆಯನ್ನೆಳೆದು ಪೇಟೆಯ ನವನಿರ್ಮಾತೃ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜವಾಬ್ದಾರಿಯುತ ಪದವಿಗೆ ಆಯ್ಕೆ:
ಕಾಂಗ್ರೆಸ್ ಪಕ್ಷದ ತಳ ಮಟ್ಟದಿಂದ ಬ್ಲೋಕ್, ಜಿಲ್ಲಾ ಮಟ್ಟದವರೆಗೂ ಸಂಘಟನಾ ಸಾಮರ್ಥ್ಯವಿರುವ ಸೋಮಶೇಖರ್ ಅವರನ್ನು ಪಕ್ಷದ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ನಿಭಾಯಿಸಲು ಆಯ್ಕೆ ಮಾಡಲಾಗಿದೆ. 2015ರಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಇವರ ಪಕ್ಷ ಸಂಘಟನಾ ಚಾತುರ್ಯದಿಂದಾಗಿ ಮಂಜೇಶ್ವರದಲ್ಲಿ ಎರಡು ಬಾರಿ ವಿಧಾನಸಭಾ ಚುನಾವಣೆಗಳು ಸೋಲಿನ ಅಂತರದಿಂದ ಪಾರಾಗಿ ಯುಡಿಎಫ್ ಅಭ್ಯರ್ಥಿಯ ವಿಜಯ ಪತಾಕೆ ಹಾರಿಸಲು ಕಾರಣವಾಗಿತ್ತು ಎನ್ನುವುದು ಉಲ್ಲೇಖನೀಯ. 2016ರಲ್ಲಿ ಆಯ್ಕೆಯಾದ ಶಾಸಕ ಅಬ್ದುಲ್ ರಸಾಕ್ ಹಾಗೂ 2021ರಲ್ಲಿ ಮಂಜೇಶ್ವರ ವಿಧಾನಸಭೆಯಿಂದ ಆಯ್ಕೆಯಾದ ಎಕೆಎಂ ಆಶ್ರಫ್ ಅವರ ಗೆಲುವಿಗೆ ಎಣ್ಮಕಜೆ ಮಂಡಲದಿಂದ ಅತ್ಯಧಿಕ ಮತಗಳನ್ನು ಕಾಯ್ದುಕೊಳ್ಳಲು ಸೋಮಶೇಖರ್ ನಡೆಸಿದ ಚಾಣಕ್ಷ್ಯತನ ಹಾಗೂ ಪಕ್ಷ ಸಂಘಟನೆ ಮುಖ್ಯ ಕಾರಣವಾಗಿತ್ತು ಎಂಬುದು ರಾಜಕೀಯ ಇತಿಹಾಸ ಉಲ್ಲೇಖನೀಯ ವಿಚಾರವಾಗಿದೆ,
ಸಹಕಾರಿ ತತ್ವದ ಪ್ರತಿಪಾದಕ : ಪರಂಪರಾಗತ ಕೃಷಿ ಕುಟುಂಬದಲ್ಲಿ ಜನಿಸಿರುವ ಸೋಮಶೇಖರ್ ಜೆ.ಎ.ಸ್.ಅವರಿಗೆ ಸಹಜವಾಗಿಯೇ ಸಹಕಾರಿ ತತ್ವ ಪ್ರತಿಪಾದನೆಗಳು ಸ್ವಯಂ ಕರಗತ.ಆದ್ದರಿಂದಲೇ ಇವರ ಆಡಳಿತಾವಧಿಯಲ್ಲಿ ಕೃಷಿಕರಿಗೆ ಹೆಚ್ಚಿನ ಪ್ರಾಧನ್ಯತೆ ಕಲ್ಪಿಸಿ ಅನುಕೂಲವಾದ ಸವಲತ್ತನ್ನು ಸರಿಯಾದ ಸಮಯ ಹಾಘೂ ಸಂದರ್ಭಕ್ಕೆ ಜಾರಿಗೊಳಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ ಅಧ್ಯಕ್ಷರೆಂಬ ಕೃಷಿಕರ ಹೆಗ್ಗೆಳಿಕೆಗೆ ಪಾತ್ರರಾಗಿದ್ದಾರೆ.
2016ರಲ್ಲಿ ಮಂಜೇಶ್ವರ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮಾಭಿವೃದ್ಧಿ ಬ್ಯಾಂಕಿನ ಚುನಾಯಿತ ಅಧ್ಯಕ್ಷೆರಾಗಿ ಆಯ್ಕೆಯಾದರು. ಬ್ಯಾಂಕ್ ಮೂಲಕ ತಾಲೂಕಿನ ಕೃಷಿಕರಿಗೆ ಭೂ ಅಭಿವೃದ್ಧಿ ,ಕೃಷಿ ಅಗತ್ಯ ಸಾಲ ವಿತರಣೆ ಮೊದಲಾದ ಯೋಜನೆಗಳನ್ನು ಕೈಗೆತ್ತಿಕೊಂಡ ಇವರ ಅಡಳಿತ ಅವಧಿಯಲ್ಲಿ ಬ್ಯಾಂಕ್ ಚಟುವಟಿಕೆಗಳು ಗರಿಷ್ಠ ಮಟ್ಟಕ್ಕೆರಿತು. ಇದರ ಪ್ರತಿಫಲ ಎಂಬಂತೆ 2021 ಫೆಬ್ರವರಿಯಲ್ಲಿ ನಡೆದ ಇದೇ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಿ ಮರು ಆಡಳಿತೆಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಲ್ಲದೆ 2023 ಸೆಪ್ಟಂಬರ್ 6ರಂದು ಕೇರಳ ರಾಜ್ಯ ಸಹಕಾರಿ ಕೃಷಿ ಗ್ರಾಮಾಭಿವೃದ್ಧಿ ಬ್ಯಾಂಕಿನ ನಿರ್ದೇಶಕರಾಗಿ ನಾಮ ನಿರ್ದೇಶಿಸಿತರಾಗಿದ್ದಾರೆ.
ಬಹುಭಾಷಾ ವಲ್ಲಭ-ಜನಸ್ನೇಹಿ ಸಂಘಟಕ :
ಕನ್ನಡ,ತುಳು,ಮಲೆಯಾಳ,ಕೊಂಕಣಿ,ಹಿಂದಿ,ಇಂಗ್ಲೀಷ್ ಬಾಷೆಗಳನ್ನು ಬಲ್ಲ ಸೋಮಶೇಖರ್ ಅವರು ನಿತ್ಯ ಪತ್ರಿಕೆ ಓದು, ಟಿವಿ ಮಾಧ್ಯಮಗಳ ವಾರ್ತಾ ವೀಕ್ಷಣೆಗಳಲ್ಲದೆ ಸಾಂಸ್ಕೃತಿಕ,ಸಾಹಿತ್ಯಿಕ,ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಹವ್ಯಾಸವನ್ನಾಗಿರಿಸಿದ್ದಾರೆ. ಜನರ ಆಶೋತ್ತರಗಳಿಗೆ ನೇರವಾಗಿ ಸ್ಪಂದಿಸುವ ಇವರು ಪಂಚಾಯತು ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಬಳಿಕ ದಿನಂಪ್ರತಿ ಕಚೇರಿಯಲ್ಲಿ ತಮ್ಮನ್ನು ಭೇಟಿಯಾಗಲು ಬಂದ ಜನ ಸಾಮಾನ್ಯನ ಸಂಕಷ್ಟಗಳನ್ನು ಪರಿಶೀಲಿಸಿ, ಸ್ಥಳ ಸಂದರ್ಶಿಸಿ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಮುತುವರ್ಜಿವಹಿಸುವ ನಿಜ ಅರ್ಥದ ಅಧ್ಯಕ್ಷರಾಗಿದ್ದಾರೆ ಎಂಬುದು ಇಲ್ಲಿನ ಪ್ರತಿಯೊಬ್ಬ ಜನತೆಯ ಅಂಬೋಣವಾಗಿದೆ.
ಸ್ವಾತಂತ್ರ್ಯೋತ್ಸವದ 75 ನೇ ವರ್ಷಚಾರಣೆಯ ಅಮೃತ ಮಹೋತ್ಸವ ಸಂಭ್ರಮದಲ್ಲಿ ಎಣ್ಮಕಜೆ ಗ್ರಾಮ ಪಂಚಾಯತಿನಾದ್ಯಂತ ಇದ್ದ 75 ವರ್ಷ ಮೇಲ್ಪಟ್ಟ ಸಾಧಕರನ್ನು,ಹಿರಿಯರನ್ನು ಗುರುತಿಸಿ ಗೌರವಿಸುವ ಅಭೂತಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಲ್ಲದೆ ಗ್ರಾಮ ಪಂಚಾಯತು ವತಿಯಿಂದ ವರ್ಷಂಪ್ರತಿ ಓಣಂ ನಾಡಹಬ್ಬ ಆಚರಣೆ,
ವಿವಿಧ ರಾಷ್ಟ್ರೀಯ ದಿನಾಚರಣೆ, ಕೇರಳೋತ್ಸವದಂತಹ ಪ್ರತಿಭಾ ವಿಕಸದ ಪೂರಕ ಯಶಸ್ವಿ ಕಾರ್ಯಕ್ರಮಗಳ ಆಯೋಜನೆಗೆ ಕಾಳಜಿವಹಿಸಿದ್ದಾರೆ. ಯುಡಿಎಫ್ ಸಹ ಸಂಘಟನೆಗಳಾದ ಮುಸ್ಲಿಂ ಲೀಗ್,ಯೂತ್ ಲೀಗ್ ಪಕ್ಷಗಳೊಡನೆ ಹಾಗೂ ನೇತಾರರೊಡನೆ ನಿಕಟ ಸಂಪರ್ಕ ಇರಿಸಿ ನಾಡಿನ ಅಭಿವೃದ್ಧಿಗಾಗಿ ಅಹರ್ನಿಶಿ ದುಡಿಯುವ ಸೋಮಶೇಖರ್ ಜೆ.ಎಸ್. ದಿನದ 24 ಗಂಟೆಗಳಲ್ಲಿ 6 ಗಂಟೆಯ ಸಮಯ ಕಚೇರಿ ಕೆಲಸಗಳಲ್ಲಿ ತಲ್ಲೀನರಾಗುತ್ತಾರೆ.
ಶೇಣಿ ಶ್ರೀಶಾರದಾಂಬ ವಿದ್ಯಾ ಸಂಸ್ಥೆಗಳ ಪ್ರಬಂಧಕರಾಗಿ ಪರಂಪರಾಗತವಾಗಿ ಬಂದ ಶೈಕ್ಷಣಿಕ ಪ್ರಗತಿಗೂ ಕಾರಣಕರ್ತರಾಗುವ ಇವರ ಸೇವಾವಧಿಯಲ್ಲಿ ಶಾಲೆಯ ಪ್ರಾಥಮಿಕ ಸೌಲಭ್ಯಗಳಲ್ಲದೆ ,ಮೂಲಭೂತ ಅವಶ್ಯಕತೆಗಳು ಪೂರೈಸಿಕೊಂಡು ಈ ಶಿಕ್ಷಣ ಸಂಸ್ಥೆ ಒಂದನೇ ತರಗತಿಯಿಂದ ಪ್ಲಸ್ ಟು ವರೆಗೂ ಅಭಿವೃದ್ಧಿ ಪಥದತ್ತ ಮುನ್ನಡೆಯಿತು.
ಹೀಗೆ ಸಾಮಾಜಿಕವಾಗಿಯೂ, ರಾಜಕೀಯವಾಗಿಯೂ ತನ್ನನ್ನು ತಾನು ದಿನದ 24 ಗಂಟೆಯೂ ಬಾಹ್ಯ ಜಗತ್ತಿನ ಜನಪರ ಕೆಲಸ ಕಾರ್ಯಗಳಿಗೆ ತನ್ನನ್ನು ಸಮರ್ಪಿಸಿಕೊಂಡಿರುವ ರಾಷ್ಟ್ರೀಯ ಕರ್ತೃತ್ವ ಇರುವ ಬಲು ಅಪರೂಪದ ವ್ಯಕ್ತಿಯಾಗಿದ್ದಾರೆ ಸೋಮಶೇಖರ್ ಎಂಬ ಯುವ ಪೀಳಿಗೆ ಜನ ನಾಯಕ. ಇದೀಗ ತನ್ನ ರಾಜಕೀಯ ಸೇವಾ ಅವಧಿಯ 25ನೇ ವರ್ಷ ಅಂದರೆ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಈ ಯುವ ನಾಯಕ
ಪತ್ನಿ ಶಶಿರೇಖಾ (ಪ್ರೌಢ ಶಾಲಾ ಶಿಕ್ಷಕಿ) ಪುತ್ರಿ ಅನ್ವಿತಾ ಅವರೊಂದಿಗೆ ಸಂತೃಪ್ತ ಸಂಸಾರ ಸಾಗಿಸುತ್ತಿದ್ದಾರೆ.
ಚಿತ್ರ ಲೇಖನ : ಜಯ ಮಣಿಯಂಪಾರೆ (ಪತ್ರಕರ್ತರು)




































0 Comments