ಪೆರ್ಲ: ಕಳೆದ ಒಂದು ದಿನದ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ನೆರೆಮನೆಯ ಬಾವಿಯಲ್ಲಿ ಪತ್ತೆಯಾಗಿದೆ. ಪೆರ್ಲ ಅಡ್ಕ ಅಬ್ರಾಜೆ ನಿವಾಸಿ ಯತೀಶ (36) ನ ಮೃತದೇಹ ಜನವಾಸವಿಲ್ಲದ ನೆರೆ ಮನೆಯ ಬಾವಿಯಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ. ಯತೀಶರ ತಂದೆ ಈಶ್ವರ ನಾಯ್ಕ್ ಸೋಮವಾರ ಮುಂಜಾನೆ ನಿಧನರಾಗಿದ್ದು, ಬಳಿಕ ಯತೀಶ ನಾಪತ್ತೆಯಾಗಿದ್ದರು. ಈಶ್ವರ ನಾಯ್ಕ್ ರ ಪತ್ನಿ ಪಾರ್ವತಿ ಈ ಹಿಂದೆ ನಿಧನರಾಗಿದ್ದು, ಅಸೌಖ್ಯದಿಂದ ಮಲಗಿದ್ದಲ್ಲೆ ಆದ ಈಶ್ವರ ನಾಯ್ಕ್ ರನ್ನು ಮಗ ಯತೀಶ ನೋಡಿಕೊಂಡಿದ್ದರು. ಸೋಮವಾರ ಮುಂಜಾನೆ ಸುಮಾರು 3.30ಕ್ಕೆ ಈಶ್ವರ ನಾಯ್ಕ್ ನಿಧನರಾಗಿದ್ದು, ಬೆಳಗ್ಗೆ 8 ಗಂಟೆಯಿಂದ ಯತೀಶ ನಾಪತ್ತೆಯಾಗಿದ್ದರು.ಮೃತದೇಹದ ಅಂತ್ಯಕ್ರಿಯೆ ನಡೆಸುವಾಗಲೂ ಯತೀಶ ಸ್ಥಳದಲ್ಲಿರಲಿಲ್ಲ. ಯತೀಶರ ಮೊಬೈಲ್ ಫೋನ್, ಚಪ್ಪಲಿ ಮನೆಯಲ್ಲಿ ಪತ್ತೆಯಾಗಿತ್ತು. ಬಳಿಕ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಲಾಗಿತ್ತು. ಮಂಗಳವಾರ ಸಂಜೆ ಹುಡುಕಾಡಿದಾಗ ಯತೀಶರ ಮೃತದೇಹ ಮನೆ ಸಮೀಪದ ಜನವಾಸವಿಲ್ಲದ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಮೃತದೇಹವನ್ನು ಮೇಲೆತ್ತಿದ್ದಾರೆ. ತಂದೆಯ ನಿಧನದ ಶೋಕದಿಂದ ಯತೀಶ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.ಯತೀಶ ಇಬ್ಬರು ಸಹೋದರ ಒರ್ವ ಸಹೋದರಿಯನ್ನು ಅಗಲಿದ್ದಾರೆ.
0 Comments