ಪೆರ್ಲ : ಭೂರಹಿತ ಬಡವರಿಗೆ ಮನೆ ಮಾಡಿ ಕುಳಿತುಕೊಳ್ಳಲು ಕನಿಷ್ಠ ಪಕ್ಷ ಸರಕಾರ ನೀಡುವ ಭೂಮಿ ಹಂಚಿಕೆಯಲ್ಲಿ ಭಾರೀ ಕೋಲಹಲ ಸೃಷ್ಠಿಸುತ್ತಿರುವ ಎಣ್ಮಕಜೆ ಗ್ರಾಮ ಕಚೇರಿ ವ್ಯಾಪ್ತಿಯಲ್ಲಿ ಬಡವರ ಭೂಮಿಯನ್ನು ತಡೆ ಹಿಡಿದು ಲಂಚದ ಆಸೆಯಿಂದ ಅನರ್ಹರಿಗೆ ವಿತರಿಸುವ ಜಾಲ ಸಕ್ರಿಯವಾಗಿದ್ದು ಹೀಗಿರುವ ನಡುವೆ ಕಳೆದ 20 ವರ್ಷಗಳಿಂದೀಚೆ ಭೂಮಿ ಲಭಿಸದೆ ತಡೆ ಹಿಡಿದ ಅಧಿಕಾರಿಗಳ ಕ್ರಮದ ವಿರುದ್ಧ ಸ್ವತಃ ಫಲಾನುಭವಿಗಳೇ ತಾಲೂಕು ಕಚೇರಿಗೆ ತೆರಳಿ ಲ್ಯಾಂಡ್ ಅಸೈನಮೆಂಟ್ ಸಭೆ ನಡೆಯುವ ವೇಳೆಗೆ ಮುತ್ತಿಗೆ ಹಾಕಿದ ಪ್ರಕರಣವೊಂದು ಉಪ್ಪಳ ತಾಲೂಕು ಕಚೇರಿಯಲ್ಲಿ ನಡೆದಿದೆ. ಇದರಿಂದಾಗಿ ಲಂಚ ಗಳಿಸಿ ಭೂಮಿ ವಿತರಿಸುವ ಗ್ರಾಮಾಧಿಕಾರಿಯ ಬಣ್ಣ ಬಯಲಿಗೆ ಬರುತ್ತಿದ್ದು ಆರೋಪಗಳನ್ನು ಪರಿಶೀಲಿಸಿದ ಕ್ರಮಕೈಗೊಂಡ ಬಳಿಕವಷ್ಟೆ ಎಣ್ಮಕಜೆ ಗ್ರಾಮ ಪರೀಧಿಯಲ್ಲಿ ಭೂ ಹಂಚಿಕೆ ನಡೆಸಬೇಕೆಂದು ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಸಹಿತ ಸಂಬಂಧಪಟ್ಟವರ ಸಭೆ ತೀರ್ಮಾನ ಕೈಗೊಂಡಿರುವುದಾಗಿ ತಿಳಿದು ಬಂದಿದೆ.
ಘಟನೆ ವಿವರ : ಎಣ್ಮಕಜೆ ಗ್ರಾಮ ಪಂಚಾಯತಿನ ಪೆರ್ಲ ಗ್ರಾಮ ಕಚೇರಿ ವ್ಯಾಪ್ತಿಯಲ್ಲಿ ಪಿಪಿ ಲ್ಯಾಂಡ್ ಮತ್ತು ಜಿಎ ಲ್ಯಾಂಡ್ ಗೆ ಒಳಪಟ್ಟ ಹಲವಾರು ಸ್ಥಳಗಳು ಮೀಸಲಿದ್ದು ಇದನ್ನು ಸ್ಥಳೀಯ ಗ್ರಾಮಾಧಿಕಾರಿ ಕೆಲವು ದಲ್ಲಾಳಿಗಳ ಜತೆಗೂಡಿ ಲಕ್ಷಗಟ್ಟಲೆ ಲಂಚ ಪಡೆದುಕೊಂಡು ದೂರದ ಊರಿನವರಿಗೆ ಈ ವಿಲೇಜ್ ನಲ್ಲಿ ಪಟ್ಟೆ ಮಾಡಿ ವಿತರಿಸುವ ದಂಧೆ ನಡೆಸುತ್ತಿರುವುದಾಗಿ ಆರೋಪಿಸಲಾಗಿದೆ. ಎಣ್ಮಕಜೆಯ ಉಕ್ಕಿನಡ್ಕ,ಅಮೆಕ್ಕಳ, ಕುರೆಡ್ಕ,ಬೆಂಗಪದವು, ಬಜಕೂಡ್ಲು,ಖಂಡಿಗೆ ಪ್ರದೇಶಗಳಲ್ಲಿ ಇಂತಹ ಸರಕಾರಿ ಸ್ಥಳಗಳನ್ನು ಸಂಬಂಧಪಟ್ಡವರು ಲಂಚ ಪಡೆದು ಅನ್ಯರ ಪಾಲಾಗಿಸುತ್ತಿರುವುದಾಗಿ ದೂರಲಾಗಿದೆ. ಉಕ್ಕಿನಡ್ಕದಲ್ಲಿ ಕಳೆದ ಹಲವು ವರ್ಷಗಳಿಂದ ಗುಡಿಸಲು ಕಟ್ಟಿ ಕುಳಿತು ಕೋರ್ಟಿನ ತಡೆ ಅನುಭವಿಸುತ್ತಿರುವ ಬಡ ಕುಟುಂಬಗಳ ಭೂಮಿಯನ್ನು ಕೆಲವು ಅಧಿಕಾರಿಗಳು ಹಣ ಬಲ ಉಪಯೋಗಿಸಿಕೊಂಡು ಬೇರೆಯವರಿಗೆ ಅದೇ ಜಾಗವನ್ನು ಸ್ವಂತ ಮಾಡಿಕೊಡುವುದರ ವಿರುದ್ಧ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ. ಇದೇ ರೀತಿ ಬಜಕೂಡ್ಲು ಭಾಗದಲ್ಲಿ ಭೂಮಿಯ ಡಿನೋಟಿಸ್ ಲಭಿಸಿದ ಬಡ ಕುಟುಂಬಗಳಿ ಭೂ ಹಂಚಿಕೆ ನಡೆಸದೆ ಲಂಚಕ್ಕಾಗಿ ಸತಾಯಿಸುವ ಬಗ್ಗೆಯೂ ಆರೋಪವಿದೆ. ಇದನ್ನು ಸಹಿಸದ ಸ್ಥಳೀಯರು ತಾಲೂಕು ಕಚೇರಿಗೆ ತೆರಳಿ ಲ್ಯಾಂಡ್ ಅಸೈನಮೆಂಟ್ ಸಭೆ ನಡೆಯುವ ಸಂದರ್ಭ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಶಾಸಕ ಎಕೆಎಂ ಆಶ್ರಫ್, ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ್, ಜಿ.ಪಂ.ಸದಸ್ಯ ಗೋಲ್ಡನ್ ರಹಮಾನ್ ಸಹಿತ ಹಲವು ಜನ ಪ್ರತಿನಿಧಿಗಳು ಈ ಗ್ರಾಮ ಕಚೇರಿಯ ಅಧಿಕಾರಿಯ ದುರ್ನಡತೆಯ ಬಗ್ಗೆ ಸಂಬಂಧಪಟ್ಟವರ ಕ್ರಮಕೈಗೊಂಡು ಸ್ಥಳ ಪರೀಶೀಲನೆ ನಡೆಸಿ ಅರ್ಹರಿಗೆ ಭೂಮಿ ಹಂಚುವ ಪ್ರಕ್ರಿಯೆ ನಡೆಸಬೇಕೆಂದು ಅಗ್ರಹಿಸಿದ್ದರು.


0 Comments