ಪೆರ್ಲ : ಪೆರ್ಲದಿಂದ ಕಾಸರಗೋಡು ಭಾಗಕ್ಕೆ ತೆರಳುವ ಖಾಸಗೀ ಬಸ್ಸಿನ ಸಿಬ್ಬಂದಿಗಳ ನಡುವೆ ಸಮಯ ವಾಗ್ವಾದ ನಿತ್ಯ ಸಂಭವವಾಗುತ್ತಿದ್ದು ಬಡಪಾಯಿ ಪ್ರಯಾಣಿಕರು ಇದಕ್ಕೆ ಬಲಿಯಾಗುತ್ತಿರುವುದಾಗಿ ದೂರು ಕೇಳಿ ಬಂದಿದೆ. ಸಂಜೆ ಸರಿ ಸುಮಾರು 5.30ಯಿಂದ 6,7 ಗಂಟೆಯ ವರೆಗೆ ಇಲ್ಲಿನ ಖಾಸಗೀ ಬಸ್ಸುಗಳ ನಡುವೆ ಪರಸ್ಪರ ಸಮಯ ವಾಗ್ವಾದ ನಡೆಯುತ್ತಿದ್ದು ಬಸ್ಸು ಸಿಬ್ಬಂದಿಗಳು ಹೊಯಿಕೈ ನಡೆಸುವುದುದಕ್ಕೆ ಪ್ರಯಾಣಿಕರು ಮೂಕ ಸಾಕ್ಷಿಯಾಗಿದ್ದಾರೆ.
ಕಳೆದ ಶುಕ್ರವಾರ ಈ ಘಟನೆ ನಡೆದಿದ್ದು ಇದೀಗ ಸೋಮವಾರ ಸಂಜೆ ಪ್ರಕರಣ ಮರುಕಳಿಸಿರುವುದಾಗಿ ಪ್ರಯಾಣಿಕರು ದೂರಿದ್ದಾರೆ. ಕಾಸರಗೋಡು ಪೆರ್ಲ ನಡುವೆ ಸಂಚರಿಸುವ ಖಾಸಗೀ ಬಸ್ಸುಗಳ ಸಿಬ್ಬಂದಿಗಳು ಈರೀತಿ ಪ್ರಯಾಣಿಕರ ನಡುವೆಯೇ ಬೀದಿ ಗಲಾಟೆಗಿಳಿಯುತ್ತಿದ್ದು ರಾತ್ರಿಯಾಗುತ್ತಿದ್ದಂತೆ ಇಲ್ಲಿನವರು ಬಸ್ಸು ಪ್ರಯಾಣಕ್ಕೆ ಆತಂಕಿತರಾಗಬೇಕಾಗುತ್ತದೆ. ಬಸ್ಸಿನ ಓಡಾಟ ನಡುವಿನ ಸಮಯ ವಾಗ್ವಾದ ಪ್ರಮುಖ ಕಾರಣವಾಗಿದ್ದು ಸೋಮವಾರ ಸಂಜೆ ಒಂದು ಖಾಸಗೀ ಬಸ್ಸು ಸಿಬ್ಬಂದಿಗಳು ಗುಂಪಾಗಿ ಬಂದು ಇನ್ನೊಂದು ಬಸ್ಸಿನ ಡ್ರೈವರಿಗೆ ಥಳಿಸಿದ ಪ್ರಕರಣ ನಡೆದಿತ್ತು.
ಇದರಿಂದಾಗಿ ಬಡಪಾಯಿ ಪ್ರಯಾಣಿಕರು ಬಸ್ಸು ಪ್ರಯಾಣ ತಟಸ್ಥಗೊಂಡು ಕಂಗಾಲಾಗಿದ್ದು ಕೆಎಸ್ಸಾರ್ಟಿಸಿ ಬಸ್ಸು ಹೆಚ್ಚುವರಿಯಾಗಿ ಈ ಸಮಯದಲ್ಲಿ ಸಂಚಾರ ನಡೆಸುವಂತಾಗಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ನಿತ್ಯ ಪ್ರಯಾಣಿಕರು ಸಾರಿಗೆ ಸಚಿವರಿಗೆ ದೂರು ನೀಡಲು ಮುಂದಾಗಿರುವುದಾಗಿ ತಿಳಿದು ಬಂದಿದೆ. ಇದೇ ವೇಳೆ ಬಸ್ಸು ಸಿಬ್ಬಂದಿಗಳ ಹಾಗೂ ಬಸ್ಸು ನಿಲುಗಡೆಯ ಪ್ರಶ್ನೆ ಬಗೆ ಹರಿಸಲು ಪೋಲಿಸ್ ಎಯ್ಡ್ ಪೋಸ್ಟ್ ಪೆರ್ಲದಲ್ಲಿ ಶೀಘ್ರವೇ ಸ್ಥಾಪಿಸಬೇಕೆಂದು ಸ್ಥಳೀಯ ವ್ಯಾಪಾರಿಗಳು ಆಗ್ರಹಿಸಿದ್ದಾರೆ.


0 Comments