ಕಾಸರಗೋಡು : ಗಡಿನಾಡ ಕನ್ನಡಿಗರು ಯಾವ ದೇಶದ ನಾಡಿನಲ್ಲಿದ್ದರೂ ತಮ್ಮ ಸಾಧನೆಗಳನ್ನು ಮೆರೆಯುತ್ತಾ ನಾಡು ಇಡೀ ಕೊಂಡಾಡುವಂತಾಗಿಸುತ್ತಾರೆ ಎಂಬುದು ಸ್ಪಷ್ಟ. ಎತ್ತಣ ಕಾಸರಗೋಡು "ಎತ್ತಣ ಆಂಧ್ರ ಪ್ರದೇಶ್ ಎತ್ತಣಿಂದೆತ್ತಣ ಸಂಭಂಧವಯ್ಯ..." ಎಂದಾಗ ಇಂತಹ ಅಂತರಾಜ್ಯ ನಂಟಿನ ನಡುವೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಗಡಿನಾಡ ಕನ್ನಡಿಗನೋರ್ವರಿಗೆ ದೂರದ ಆಂಧ್ರಪ್ರದೇಶದಲ್ಲಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಬಾಜನರಾಗುವ ಮೂಲಕ ಅಭಿಮಾನ ಮೂಡಿಸಿದ್ದಾರೆ. ಕಾಸರಗೋಡಿನ ನೀರ್ಚಾಲು ಸಮೀಪ ಕನ್ನೆಪ್ಪಾಡಿ ನಿವಾಸಿ ಕಿಶೋರ್ ಕೆ. ಅವರು ಈ ಬಾರಿ ಶಿಕ್ಷಕ ದಿನಾಚರಣೆಗೆ ಆಂದ್ರಪ್ರದೇಶದ ಖಾಸಗೀ ಆನ್ ಎಯಿಡೆಡ್ ಶಾಲಾ ಅಸೋಸಿಯೇಶನ್ ನೀಡುವ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕಳೆದ 10 ವರ್ಷಕ್ಕಿಂತಲೂ ಮಿಗಿಲಾಗಿ ಆಂದ್ರಪ್ರದೇಶದ ಖಾಸಗೀ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ಕಿಶೋರ್ ಕೆ. ಅಲ್ಲಿನ ವಿದ್ಯಾಲಯದಲ್ಲಿ ರಾಷ್ಟ್ರೀಯ ಆಚರಣೆಗಳನ್ನು ವಿಭಿನ್ನವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದರು. ಕೇರಳ - ಕರ್ನಾಟಕದ ನಾಡ ಹಬ್ಬವಾದ ಓಣಂ - ದಸರಾ ಹಬ್ಬ ಆಚರಣೆಯ ಮಹತ್ವವನ್ನು ಮಕ್ಕಳಿಗೆ ಸಾರುವ ಮೂಲಕ ವಿಶೇಷ ಆಚರಣೆ ನಡೆಸಿದ್ದರು. ಇವರ ಮುತುವರ್ಜಿಯ ಶಾಲಾ ಶಿಸ್ತುಬದ್ಧತೆ ಮತ್ತು ಮಕ್ಕಳ ಸಾಮಾಜಿಕ ಕಾರ್ಯ ಪ್ರೇರಣೆಗಾಗಿ ಈ ಬಾರಿ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದಾಗಿ ತಿಳಿದು ಬಂದಿದೆ. ಆಂದ್ರ ಪ್ರದೇಶದ ಗಿಡಲೂರಿನ ಶ್ರೀಸಾಯಿ ಇಂಟರ್ ನೇಶನಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ಕಿಶೋರ್ ಕೆ. ಜಾನಪದ ಕಲಾವಿದರಾಗಿದ್ದು ಭಜನೆ,ತಬಲ ವಾದನ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿದ್ದಾರೆ. ಕನ್ನೆಪ್ಪಾಡಿಯಲ್ಲಿ ನಿರ್ಮಾಣಗೊಂಡಿರುವ ಅಂತಲ ಮೊಗೇರ ಚಾವಡಿಯ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಪ್ರಶಂಸನೆಗೆ ಪಾತ್ರರಾಗಿದ್ದರು. ಆಂದ್ರ ಪ್ರದೇಶದ ಪ್ರಕಾಶನಂ ನ ಎನ್ ಟಿ ಆರ್ ಕಲಾ ಕ್ಷೇತ್ರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಒಂಗಲೆ ಕ್ಷೇತ್ರ ಶಾಸಕ ಧರ್ನಚಾರ್ಲ ಜನಾರ್ಧನ ರಾವ್ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನಗೈದರು.


0 Comments