ಪೆರ್ಲ : ಸಾಧನೆಯ ಛಲವೊಂದಿದ್ದರೆ ಸಾಧಕ ಪ್ರಶಸ್ತಿಗಳು ಕುಗ್ರಾಮವನ್ನು ಅರಸಿಕೊಂಡು ಮುಡಿಗೇರುತ್ತವೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದ್ದಾನೆ ಗಡಿನಾಡದ ಕಾಟುಕುಕ್ಕೆ ಗ್ರಾಮದ ಸ್ಕಂದ ಸಿ.ಯಸ್. ಎಂಬ ಬಹುಮುಖಿ ಬಾಲ ಪ್ರತಿಭೆ.
ಯಕ್ಷಗಾನದ ಮುಮ್ಮೇಳ ಹಾಗೂ ಹಿಮ್ಮೇಳಗಳೆರಡಲ್ಲಿಯೂ ಸವ್ಯಸಾಚಿ ಪ್ರತಿಭೆಯಾದ ಈತನಿಗೆ ಮಂಗಳೂರಿನ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಹಾಗೂ ಕಲ್ಕೂರ ಪ್ರತಿಷ್ಠಾನ ಕನ್ನಡ ರಾಜ್ಯೋತ್ಸವದಂಗವಾಗಿ ನೀಡಲ್ಪಡುವ ಪ್ರತಿಷ್ಠಿತ ರಾಜ್ಯೋತ್ಸವ ಗಡಿನಾಡ ಸಾಧಕ ಪುರಸ್ಕಾರಕ್ಕೆ ಆಯ್ಕೆಯಾಗುವ ಮೂಲಕ ಅಭಿಮಾನ ಮೂಡಿಸಿದ್ದಾನೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಸಣ್ಣ ಗ್ರಾಮವಾದ
ಕಾಟುಕುಕ್ಕೆಯ ಚಂದ್ರಹಾಸ ಮತ್ತು ಸಹನ ದಂಪತಿಯ ಪುತ್ರನಾಗಿ 2011ರಲ್ಲಿ ಜನಿಸಿದನು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ
ಈತನು ತನ್ನ ವಿದ್ಯಾಭ್ಯಾಸವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಾಳೆಮೂಲೆಯಲ್ಲಿ ಹಾಗೂ ಬಾಲಪ್ರಭಾ ಹಿರಿಯ
ಪ್ರಾಥಮಿಕ ಶಾಲೆ, ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಆಗಿರುತ್ತಾನೆ.
ಬಾಲ್ಯದಲ್ಲಿಯೇ ಕಲೆ, ಸಾಹಿತ್ಯ, ಭಾಷಣದಲ್ಲಿ ಆಸಕ್ತಿಯನ್ನು ಹೊಂದಿದ್ದು ವಿಶೇಷವಾಗಿ ಕರಾವಳಿಯ ಗಂಡುಕಲೆಯಾದ
ಯಕ್ಷಗಾನದಲ್ಲಿ ಅತೀವ ಆಸಕ್ತಿಯನ್ನು ಹೊಂದಿ ನಾಟ್ಯಗುರು ಸಬ್ಬಣಕೋಡಿ ರಾಮ ಭಟ್‌ರಲ್ಲಿ ನಾಟ್ಯವನ್ನು ಕಲಿತು ಮಿಂಚುತ್ತಿರುವ
ಪ್ರತಿಭೆಯಾಗಿರುತ್ತಾನೆ. ‘ನಂದಗೋಕುಲದ ಬಾಲಕೃಷ್ಣ’, ‘ಪಾಂಚಜನ್ಯದ ಕೃಷ್ಣ’, ರಾವಣೋದ್ಭವದ ರಾವಣ’, ‘ರಾಜದಿಲೀಪದ
ವೀರಕಾಸುರ’ನಾಗಿ, ‘ಶಾಂಭವಿ ವಿಲಾಸದ ಚಂಡಾಸುರನಾಗಿ’, ‘ಶಶಿಪ್ರಭಾಪರಿಣಯದ ಮಾರ್ತಾಂಡತೇಜ’, ನರಕಾಸುರ ಮೋಕ್ಷದ
ಮುರಾಸುರನಾಗಿ’ ಹೀಗೆ ಎಳವೆಯಲ್ಲಿಯೇ ಹಲವು ವೇ಼ಷಗಳನ್ನು ಮಾಡಿ ಜನ ಮೆಚ್ಚುಗೆಯನ್ನು ಗಳಿಸಿದ್ದಾನೆ. ಯಕ್ಷಗಾನದ ಹಿಮ್ಮೇಳದಲ್ಲಿ ಗುರುಗಳಾದ ತೆಂಕಬೈಲು ಮುರಳಿಕೃಷ್ಣ ಶಾಸ್ತ್ರಿ ಹಾಗೂ ನಾರಾಯಣ ಶರ್ಮ ನೀರ್ಚಾಲು ಕಾಟುಕುಕ್ಕೆ ಇವರಿಂದ ಹಿಮ್ಮೇಳ ವಾದನದ ಪಾಠವನ್ನು ಕಲಿಯುತ್ತಾ ಉತ್ತಮ ಕಲಾಗಾರನಾಗಿ ಹೊರ ಹೊಮ್ಮುತ್ತಿದ್ದಾನೆ. ಮಾತ್ರವಲ್ಲದೆ ತಬಲಾವಾದನವನ್ನು ಗುರುಗಳಾದ ಶಿವಾನಂದ ಇವರಿಂದ ಪಡೆಯುತ್ತಿರುತ್ತಾನೆ. ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರತಿನಿಧಿಕರಿಸಿದ ತಂಡದಲ್ಲಿ ಪ್ರಥಮ ಬಹುಮಾನಕ್ಕೆ ಪಾತ್ರರಾಗಿ ಜನ ಶ್ಲಾಘನೆ ಗಳಿಸಿಕೊಂಡಿದ್ದಾನೆ
ಶಾಲೆಯ ಪಠ್ಯೇತರ ಚಟುವಟಿಕೆಗಳಾದ ವಿಜ್ಞಾನ ಶಾಸ್ತ್ರ ಮೇಳ, ರಸಪ್ರಶ್ನೆ, ಚಿತ್ರಕಲೆ ಹೀಗೆ ಬಹುಮುಖಿ ಪ್ರತಿಭಾ ರಂಗದಲ್ಲಿ ತೊಡಗಿಸಿಕೊಂಡಿರುವ ಸ್ಕಂದ ಸಿ.ಯಸ್ ಗೆ ನ.೧ರಂದು ಮಧ್ಯಾಹ್ನ ಬಳಿಕ ಕೊಡಿಯಲ್ ಬೈಲ್ ನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನಿಸಲಾಗುತ್ತಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.


0 Comments