🖋️ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)
ದುಬೈ : ನನಗೆ ದೇವರು ನೀಡಿದ ಬಹು ದೊಡ್ಡ ಕೊಡುಗೆ ಏನೆಂದರೆ ಸಂಘಟನ ಶಕ್ತಿ. ಅದು ನಿಮ್ಮೆಲ್ಲರ ಆರ್ಶಿವಾದದಿಂದ ಆ ದೇವರು ಶಕ್ತಿಯನ್ನು ಕೊಟ್ಟಿದ್ದಾರೆ. ಆ ಶಕ್ತಿಯಿಂದ ಕಳೆದ 44 ವರ್ಷದಿಂದ ಯುಎಇ ಬಂಟ್ಸ್ ನ ನಾಯಕನಾಗಿ ಕೆಲಸ ಮಾಡಲಾಯಿತು. ಇಷ್ಟು ವರ್ಷ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಂಡು ಬರಲು ಕಾರಣ ಯುಎಇಯ ಮಹಾ ಪೋಷಕರು ಹಾಗೂ ನಮ್ಮ ತಂಡದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು. ನನಗೆ ಗೊತ್ತಿಲ್ಲದೆ ಮಾಡಿದ ಸನ್ಮಾನವನ್ನು ಸಂತೋಷದಿಂದ ಸ್ವೀಕರಿಸುತ್ತೇನೆ ಹಾಗೂ ನನ್ನ ಇಷ್ಟು ವರ್ಷದ ಸಂಘಟನ ಶಕ್ತಿ ನನ್ನ ಶ್ರೀಮತಿ ಮೂಲ ಕಾರಣ ಎಂದು ಹೇಳುತ್ತ ಸರ್ವೋತ್ತಮ ಶೆಟ್ಟಿಯವರು ಸಂತಸ ವ್ಯಕ್ತ ಪಡಿಸಿದರು.
ಯುಎಇ ಬಂಟ್ಸ್ ನ 47ನೇ ವರ್ಷದ "ಗಲ್ಫ್ ಬಂಟೋತ್ಸವ-2024" ಕಾರ್ಯಕ್ರಮದಲ್ಲಿ ಅವರಿಗೆ ಅರಿವಿಲ್ಲದೆ ಮಾಡಿದ ಅದ್ದೂರಿಯ,ವಿಶೇಷ ಶೈಲಿಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಕಳೆದ 47 ವರ್ಷದಿಂದ ಯುಎಇ ಬಂಟ್ಸ್ ನ ನಾಯಕನಾಗಿ ಕೆಲಸವನ್ನು ಮಾಡುತ್ತಿರುವ ಸರ್ವೋತ್ತಮ ಶೆಟ್ಟಿ ದಂಪತಿಗಳನ್ನು ಬಂಟ್ಸ್ ನ ಸಂಘಟನ ಸಮಿತಿ ಹಾಗೂ ಸಲಹಾ ಸಮಿತಿ ಮತ್ತು ಕಾರ್ಯಕರ್ತರು ಸೇರಿ ಮಾಡಿದ ಅದ್ದೂರಿಯ ಸನ್ಮಾನದಲ್ಲಿ ಸಮಿತಿಯ ಪದಾಧಿಕಾರಿಗಳು,ಸರ್ವ ಸದಸ್ಯರು ಉಪಸ್ಥಿತರಿದ್ದರು.
*ವಿನೂತನ ಶೈಲಿಯಲ್ಲಿ ಸನ್ಮಾನ*:
ಸರ್ವೋತ್ತಮ ಶೆಟ್ಟಿಯವರ ಸನ್ಮಾನದ ಪೇಟ,ಶಾಲು,ಸ್ಮರಣಿಕೆ,ಗೆಂದಳೆ ಸೀಯಳ,ಅಡಕೆ,ಬಾಳೆ ಗೊಣೆ,ತರಕಾರಿ ಬುಟ್ಟಿ,ಹಣ್ಣು ಹಂಪಲು,ಅಕ್ಕಿ ಮುಡಿ,ಭತ್ತ ಮುಡಿ,ಹಿಂಗಾರ,ಮಲ್ಲಿಗೆ ಹಾರ, ಬಣ್ಣದ ಕೊಡೆ,ಚೆಂಡೆ ವಾಲಗದೊಂದಿಗೆ ವೇದಿಕೆಗೆ ಮೆರವಣಿಗೆಯ ಮೂಲಕ ತರಲಾಯಿತು.
ವೇದಿಕೆಯಲ್ಲಿದ್ದ ಯುಎಇ ಬಂಟ್ಸ್ ನ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ,ಕಾರ್ಯದರ್ಶಿ ರವಿರಾಜ್ ಶೆಟ್ಟಿ, ಸಮಿತಿಯ ಪೋಷಕರು,ಸಂಘಟನ ಸಮಿತಿಯ ಪದಾಧಿಕಾರಿಗಳು ವ್ಯವಸ್ಥಿತವಾಗಿ ಒಂದೊಂದು ವಸ್ತುಗಳನ್ನು ಸರ್ವೋತ್ತಮ ಶೆಟ್ಟಿ ಮತ್ತು ಶ್ರೀಮತಿ ಉಷ ಶೆಟ್ಟಿಯವರಿಗೆ ಅರ್ಪಿಸಿ ಗೌರವ ಸಲ್ಲಿಸಿ ಸನ್ಮಾನಿಸಲಾಯಿತು.ಶ್ರೀಮತಿ ಶಶಿ ರವಿರಾಜ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು,ನಿತೇಶ್ ಶೆಟ್ಟಿ ಎಕ್ಕಾರ್ ಮತ್ತು ನಮ್ಮ ಕುಡ್ಲ ಚಾನೆಲ್ ವಾರ್ತಾ ವಾಚಕಿ ಶ್ರೀಮತಿ ಪ್ರೀಯ ಹರೀಶ್ ರವರು ಕಾರ್ಯಕ್ರಮ ನಿರೂಪಿಸಿದರು.





0 Comments