ಶಾರ್ಜಾದ ಮರಳುಗಾಡಿನ ವಾಣಿಜೋದ್ಯಮದಲ್ಲಿ ಅವಿರತ ಶ್ರಮ ನಿರತರಾಗಿರುವ ಕಾರ್ಕಳದ ಮಾರ್ಕ್ ಡೆನ್ನಿಸ್ ಡಿ,ಸೋಜ

 

                        ಸಾಧನೆ_ಸಮಾಚಾರ

ಶಾರ್ಜಾ: ಕರಾವಳಿಯಂತಹ ಕನ್ನಡ ನಾಡಿನಿಂದ ಬಂದು ಕೊಲ್ಲಿ ರಾಷ್ಟ್ರದ ಶಾರ್ಜಾದ ಮರಳುಗಾಡಿನ ವಾಣಿಜೋದ್ಯಮದಲ್ಲಿ ತನ್ನದೇ ಆದ ವ್ಯಕ್ತಿ ಮುದ್ರೆಯನ್ನು ಒತ್ತಿದವರೊಬ್ಬರ ಸವಿಶೇಷತೆಯ ಸಾಧನೆಗಳನ್ನು  ಸಾಧನೆ_ಸಮಾಚಾರದ ಮೂಲಕ ಅನಾವರಣಗೊಳಿಸುತ್ತಿದೆ.

 
ವ್ಯಾಪಾರೋದ್ಯಮ, ಸಮಾಜ ಸೇವೆ, ಶೈಕ್ಷಣಿಕ- ಪ್ರೋತ್ಸಾಹ, ಬಡ ಹೆಣ್ಮಕ್ಕಳ ವಿವಾಹ, ಆನಾರೋಗಿಗಳಿಗೆ ಚಿಕಿತ್ಸಾ ಸಹಾಯ, ಧಾರ್ಮಿಕ- ಸಾಂಸ್ಕೃತಿಕ ಕಾರ್ಯಗಳ ಪ್ರೋತ್ಸಾಹ, ಕನ್ನಡಿಗರಿಗಾಗಿ ಅರಬ್ ರಾಷ್ಟ್ರದಲ್ಲಿ ಸಂಘ ಸಂಸ್ಥೆಗಳ ಸ್ಥಾಪನೆ, ಪೋಷಣೆ ಹೀಗೆ ಅಗಣಿತ ಚಟುವಟಿಕೆಗಳೊಂದಿಗೆ "ಉದ್ಯೋಗದಿಂದ ಜನ ಸೇವೆ" ಎಂಬ ಧ್ಯೇಯವನ್ನು ಸಾಕ್ಷತ್ಕಾರಿಸಿ
ಅವಿರತ ಶ್ರಮ ನಿರತರಾಗಿರುವ ಕಾರ್ಕಳದ ಮಾರ್ಕ್ ಡೆನ್ನಿಸ್  ಡಿ,ಸೋಜ ಎಂಬವರೇ ಈ ಸಾಧನಾತ್ಮಕ ವ್ಯಕ್ತಿ. 

ಕಳೆದ 69 ವರುಷಗಳ ಜೀವಮಾನದ ಸಾಧನೆಯನ್ನು ಮೆರೆದ "
ಡೆನ್ನಿಸಾಬ್" ಅರ್ಥಾತ್  ಮಾರ್ಕ್ ಡೆನ್ನಿಸ್ ಡಿ.ಸೋಜರು ಯಾವತ್ತು ಪ್ರಚಾರವನ್ನು ಬಯಸಿದವರಲ್ಲ ಎಂಬುದು ಉಲ್ಲೇಖನೀಯ. ಆದ್ದರಿಂದಲೇ ಅವರ ಹಲವಾರು ಸಾಧನಾತ್ಮಕ ಕೆಲಸ ಕಾರ್ಯಗಳು ಅವರಿಗೆ ನೆನಪಿಲ್ಲದೆ ಇನ್ನೂ ಕೂಡ ತೆರೆಯ ಮರೆಯಲ್ಲಿಯೇ ಉಳಿದು ಅವಿಸ್ಮರಣೀಯವಾಗಿದೆ.
ತನ್ನ ದೂರದೃಷ್ಟಿ, ಸತತ ಪರಿಶ್ರಮದ ಮೂಲಕ ಶಾರ್ಜಾದಂತಹ ಗಲ್ಪ್ ರಾಷ್ಟ್ರದಲ್ಲಿ ತನ್ನ ಬದುಕಿನ ನೆಲೆಯೊಂದಿಗೆ, ಸಾಮಾಜಿಕ ಸಂಪರ್ಕದ ಮೂಲಕ ವ್ಯಕ್ತಿತ್ವದ ಬೆಲೆಯನ್ನು ಕಂಡುಕೊಂಡಿರುವ ಡೆನ್ನಿಸ್ ಡಿ.ಸೋಜರು ಇಂದಿನ 69. ವರುಷ ಪ್ರಾಯದಲ್ಲೂ ಯುವ ಜನತೆಗೆ ಆದರ್ಶ ಪ್ರಾಯರು. 

ತುಳು-ಕನ್ನಡ ಸಂಸ್ಕೃತಿಯನ್ನು ಸಹಜತೆಯಿಂದ ಮೈಗೂಡಿಸಿಕೊಂಡಿರುವ  ಕರಾವಳಿಯ ಕಾರ್ಕಳ ತಾಲೂಕಿನ ಮೂಡಬಿದ್ರೆ ಸಮೀಪದ ಕಲ್ಲಮುನ್ಕೂರು ಎಂಬಲ್ಲಿನ ಸಂಪ್ರದಾಯಸ್ಥ ಕ್ರೈಸ್ತ ಕುಟುಂಬದ ದಿ.ಸಾಲ್ವದೋರ್ ಡಿ‌.ಸೋಜ - ದಿ.ತೇರೆಸಾ ದಂಪತಿಗಳ ಪುತ್ರರಾಗಿ 1951ಒಕ್ಟೋಬರ್ 7ರಂದು ಮಾರ್ಕ್ ಡೆನ್ನಿಸ್ ಡಿ.ಸೋಜ ಜನಿಸಿದರು. ಸಮುದಾಯದ ಸಂಪ್ರದಾಯ,ಕೃಷಿಕರಾದ ತಂದೆ ತಾಯಿಯ ಪರಿಶ್ರಮದ ಪಾಲನೆ-ಪೋಷಣೆ ಸುಸಂಸ್ಕೃತ ವ್ಯಕ್ತಿತ್ವದೊಂದಿಗೆ ಬೆಳೆಯಲು ಅವರಿಗೆ ಅಡಿಪಾಯ ಹಾಕಿಕೊಟ್ಟಿತು. 
ನಿಡ್ಡೊಡಿಯ ಲಿಟ್ಲ್ ಪ್ಲವರ್ ಆಫ್ ಜೀಸಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ತಾಳಿಪಾಡಿಯ ಪೊಂಪೈಲ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಮುಂಬಯಿಯ ಬ್ರಿಟಿಷ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ (BIET) ಕಾಲೇಜಿನಲ್ಲಿ  ಪದವಿ ಶಿಕ್ಷಣ ಪಡೆದರು. ಅಲ್ಲಿಂದ ಮಾಯಾನಗರಿಯಾದ ಮುಂಬಯಿಯಲ್ಲಿಯೇ ಕೆಲವು ಸಮಯ ಉದ್ಯೋಗ ಕಂಡುಕೊಂಡು 1972 ರಲ್ಲಿ ಅರಬ್ ರಾಷ್ಟ್ರವಾದ ಬಹರೈನ್ ಗೆ ಕಾಲಿರಿಸಿದರು‌. ಅಲ್ಲಿಂದ 1975 ಶಾರ್ಜಾ ಎಂಬ ಮಹಾನಗರಿ ಕೈಬೀಸಿ ಕರೆಯಿತಂತೆ. ಇಲ್ಲಿ ಅರಬ್ ರಾಷ್ಟ್ರದ ಪ್ರತಿಷ್ಠಿತ ಪಾರ್ಚೂನಾ ಇಂಜಿನಿಯರಿಂಗ್ L.L.C.ಮೂಲಕ ವೃತ್ತಿ ಜೀವನಕ್ಕೆ ನಾಂದಿ ಹಾಡಿದರು. ಅಲ್ಲಿ ವ್ಯವಸ್ಥಾಪಕ,ನಿರ್ದೇಶಕ ಹೀಗೆ ಹುದ್ದೆ ನಿಭಾಯಿಸಿ ಉದ್ಯಮದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವಲ್ಲಿ ಗಮನಾರ್ಹ ಪಾತ್ರವಹಿಸಿದ್ದಾರೆ. 
ಶಾರ್ಜಾದಲ್ಲಿ ವೃತ್ತಿ ಬದುಕಿನ ಜತೆಗೆ ಸಹ ವಾಣಿಜೋದ್ಯಮಿಗಳ ಪ್ರೇರಣೆ ಹಾಗೂ ಉತ್ತೇಜನದಿಂದ "ಕೆನರಾ ವಾಣಿಜೋದ್ಯಮ ನಿಗಮ (KEL)" ಸ್ಥಾಪಿಸಿದರು. ಈ ನಿಗಮವು ಕರಾವಳಿಯ ವಾಣಿಜೋದ್ಯಮಿಗಳ ಪಾಲಿಗೆ ಮಹತ್ತರವಾದ ಕೊಡುಗೆಯಾಗಿದೆ. ಹೊಸ ಉದ್ಯಮಿಗಳಿಗೆ ವ್ಯವಹಾರ ಆರಂಭಿಸುವ ಜತೆಗೆ ಪದವಿ ಮುಗಿಸಿರುವ ಪ್ರತಿಭಾವಂತರಿಗೆ ಉದ್ಯೋಗ ಅವಕಾಶವೂ ನೀಡುತ್ತಿದೆ.ಮಂಗಳೂರಿನ ಶಕ್ತಿನಗರದಲ್ಲಿ 75 ಎಕ್ರೆ ಸ್ಥಳವನ್ನು ಹೊಂದಿರುವ ಇದರ ಸಂಸ್ಥಾಪಕ ಸದಸ್ಯ ಹಾಗೂ ಷೇರುದಾರರ ಒರ್ವರು ಮಾರ್ಕ್ ಡೆನ್ನಿಸ್ ರಾಗಿದ್ದಾರೆ. 
ಕೊಂಕಣಿ ಮಾತೃಭಾಷೆಯಾಗಿದ್ದರೂ ಉತ್ಕಟ ಕನ್ನಡಾಭಿಮಾನ ಹೊಂದಿದ್ದ ಡೆನ್ನಿಸ್ ಡಿ.ಸೋಜರು ದಿವಂಗತ ಉಮೇಶ್ ನಂತೂರು ಅವರ ಕನಸಿನ ಸಾಕ್ಷಾತ್ಕಾರವನ್ನು "ಕರ್ನಾಟಕ ಸಂಘ ಶಾರ್ಜಾ" ಸಂಘಟನೆಯನ್ನು  ಹುಟ್ಟು ಹಾಕುವ ಮೂಲಕ ನೇರೆವೇರಿಸಿದ ಸಾರ್ಥಕ ಸಾಧಕರಾಗಿದ್ದಾರೆ.  ಅದರ ಮೂಲಕ ನಾಡು-ನುಡಿ ಪ್ರೀತಿಯ ಅಪಾರ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡರು. ಕನ್ನಡಿಗರ ಪ್ರತಿಭಾ ಪ್ರೋತ್ಸಾಹಕ್ಕೆ ಮುಖ್ಯ ವೇದಿಕೆಯಾದ ಈ ಸಂಘಟನೆಯಿಂದ ಕನ್ನಡಿಗರಿಗೆ ಸರ್ವತೋಮುಖ ಸಹಾಯ ಹಸ್ತ ಚಾಚುವುದನ್ನೆ ಮುಖ್ಯ ಧ್ಯೇಯವಾಗಿಸಿ  ಶಾರ್ಜಾದಲ್ಲಿ ಕರ್ನಾಟಕ ಸಂಘ  ವಿವಿಧ ಕಾರ್ಯ ಚಟುವಟಿಕೆಗಳ ಮೂಲಕ  ಮಾದರಿ ಸಂಘವಾಗಿ ಬೆಳೆಯಿತು.
ಮಾರ್ಕ್ ಡೆನ್ನಿಸ್ ಅವರು ಭಾರತೀಯರ ಹಾಗೂ ಅರಬರ ಸ್ನೇಹ ಸೇತುವೆಯಂತಿರುವ "ಇಂಡಿಯನ್ ಅಸೋಸಿಯೇಶನ್ ಶಾರ್ಜಾ"ದ ಸದಸ್ಯರಾಗಿದ್ದಾರೆ. ಅನಿವಾಸಿ ಭಾರತೀಯರ ವಿದ್ಯಾಭ್ಯಾಸ ಹಾಗೂ ಸಾಂಸ್ಕ್ರತಿಕ ಚಟುವಟಿಕೆಗೆ ಧಾರಾಳ ಅವಕಾಶ ಮಾಡಿಕೊಟ್ಟ ಈ ಸಂಸ್ಥೆ ಮೂವತೈದು  ವರ್ಷಗಳ ನಂತರ ಒಂದು ಪ್ರಮುಖ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ.ಶಾರ್ಜಾ ಇಂಡಿಯನ್ ಸ್ಕೂಲ್ ಎಂಬ ಶಾಲೆಯನ್ನು ಸ್ಥಾಪಿಸಿ ಅನೇಕ ವಿದ್ಯಾರ್ಥಿಗಳನ್ನು ಹೊಂದಿದೆ. ದೂತವಾಸದ ಸೇವೆಯನ್ನು ಕೂಡ ನೀಡುವ ಈ ಸಂಘದ ಅಜೀವ ಸದಸ್ಯತ್ವಕ್ಕೆ ಪಾತ್ರರಾಗಿರುವ ಮಾರ್ಕ್ ಡೆನ್ನಿಸ್ ಅವರು ಇದರ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸಿಕೊಂಡು ಬಂದಿದ್ದಾರೆ.
ಇವರು ಕೆಇಎಲ್ ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.KEL ಹಾಗೂ MIC ಇದರ ಸಂಸ್ಥಾಪಕ ಸದಸ್ಯ ರಾಗಿದ್ದಾರೆ.
ಗಲ್ಫ್ ನ ಅನೇಕ ಸಂಘ ಸಂಸ್ಥೆಗಳಲ್ಲಿ ಮಾರ್ಕ್ ಡೆನ್ನಿಸ್  ಸದಸ್ಯರಾಗಿದ್ದು ಮಂಗಳೂರು ಕೊಂಕಣ್ಸ್, ತುಳುಕೂಟ,ಕನ್ನಡ ಕೂಟ,ದೈಜಿ ದುಬೈ ಇವುಗಳಲ್ಲಿ ಪ್ರಮುಖವಾದವುಗಳಾಗಿದೆ. ವಿದೇಶದಲ್ಲಿ ಮಾತ್ರವಲ್ಲದೆ ತನ್ನ ಸ್ವದೇಶದ St.Michesl Mangalorians Konkani Community (SMMKC) ಹಾಗೂ ಫ್ಲವರ್ಸ್ ಆಫ್ ನಿಡ್ಡೋಡಿ ಸಂಘದಪೋಷಕರು,ಮಾರ್ಗದರ್ಶಿಗಳಾಗಿದ್ದಾರೆ.ನಾಡಿನ ಅನೇಕ ಆನಾಥಲಯಗಳಿಗೆ, ವೃದ್ಧಾಶ್ರಮಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಉದಾರ ಮನಸ್ಸಿನಿಂದ ಸಹಾಯ ಮಾಡುವ ಮಾರ್ಕ್ ಡೆನ್ನಿಸ್ ಅವರಿಂದ ಆಶ್ರಯ ಸಂಸ್ಥೆ, ಉಡುಪಿಯ ಮಾನಸ ರಿಹಬಲಿಟೇಶನ್ ಸೆಂಟರ್,ಬೆಳ್ತಂಗಡಿಯ ಸೀಯೋ ಆಶ್ರಮಗಳಿಗೆ ಸಹಾಯ ಸಹಕಾರಗಳು ಸಲ್ಲಿಸಲ್ಪಡುತ್ತದೆ. ಮಾನಸ ಪುನರ್ವಸತಿ ಕೇಂದ್ರ, ಪಂಬೂರು, ಶಿರ್ವಾ ಹಾಗೂ
ಮಾಂಡ್-ಸೊಬಾಣ್ ಶಕ್ತಿನಗರ, ಮಂಗಳೂರು ಇದರ ಹಿತೈಷಿ ಹಾಗೂ ದಾನಿಯಾಗಿದ್ದಾರೆ
ಹಲವು ಸಂಘ ಸಂಸ್ಥೆಗಳ, ಧಾರ್ಮಿಕ-ಶೈಕ್ಷಣಿಕ ಕೇಂದ್ರಗಳ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವದ ಮೂಲಕ ಧನ ಸಹಾಯ ಮಾಡಿರುವ ಮಾರ್ಕ್ ಡೆನ್ನಿಸ್ ಬಡ ಮಕ್ಕಳ ಶಿಕ್ಷಣ ಹಾಗೂ ಹೆಣ್ಮಕ್ಕಳ ವಿವಾಹಗಳನ್ನು ನೇರೆವೇರಿಸಿ ಸಾರ್ಥಕತೆ ಕಂಡುಕೊಂಡಿದ್ದಾರೆ. 
ಇವರ ಜೀವಮಾನದ ಸಾಧನೆಯನ್ನು ಗುರುತಿಸಿ ಇವರನ್ನು ಪ್ರಥಮವಾಗಿ ದುಬೈಯ ಷೇಕ್ ರಾಶೀದ್ ಆಡಿಟೋರಿಯಂನಲ್ಲಿ SMMKC ವತಿಯಿಂದ ನಡೆದ ಬೃಹತ್ ಸಮಾರಂಭದಲ್ಲಿ ಸನ್ಮಾನಿಸಲಾಗಿತ್ತು. ಕರ್ನಾಟಕ ಸಂಘ ಶಾರ್ಜಾದ ವತಿಯಿಂದ ಪ್ರತಿಷ್ಠಿತ "ಮಯೂರ ಪ್ರಶಸ್ತಿ" ಹಾಗೂ 
2015ರ  "ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ", "ರಚನ ಎನ್ ಆರ್ ಐ ಎಂಟರ್ ಫ್ರೇನ್ಸರ್2013 ಪ್ರಶಸ್ತಿ" ಸಹಿತ ಹಲವು ಪುರಸ್ಕಾರ -ಸನ್ಮಾನ ನೀಡಿ ಗೌರವಿಸಿದೆ.
ಪತ್ನಿ ಲೆಸಿ ಹಾಗೂ ಮಕ್ಕಳಾದ ಲವೀಟ ಡಿ.ಸೋಜ, ರೆನಿಟಾ ಡಿ.ಸೋಜ, 
ರಿಯಾನ್ (ರಾಯನ್)  ಡಿ.ಸೋಜ,ಡಾಮಿಯನ್ ಡಿ.ಸೋಜ ಎಂಬವರೊಂದಿಗೆ ಸಂತೃಪ್ತ ಸಂಸಾರ ಹೊಂದಿದ್ದಾರೆ. 
ತಂದೆ-ತಾಯಿಯ ಪ್ರೀತಿಯ ಲಾಲನೆ ಪಾಲನೆಯ ಯಶಸ್ಸಿನ ನೆರಳಿನಲ್ಲಿ ಮುಂದುವರಿಯುವ ಇವರ ಮಕ್ಕಳು ಕುಟುಂಬ ಜೀವನದ ಸಂತಸದ ಕ್ಷಣವನ್ನು ಕಳೆಯುತ್ತಿದ್ದಾರೆ.
ಮಾರ್ಕ್ ಡೆನ್ನಿಸ್ ಅವರು ಮುಂಬಯಿ, ಬಹರೈನ್ ,ಶಾರ್ಜಾ ಹಾಗೂ ದುಬೈಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಂಪೆನಿಯಲ್ಲಿ ವಿವಿಧ  ಹುದ್ದೆ ನಿರ್ವಹಿಸಿದ ಯಶಸ್ವಿ ಸಾಧಕ.
ಈ ಹೆಮ್ಮೆಯ ಸಾಧಕ ಮಹನೀಯರು ಇನ್ನಷ್ಟು ಕೊಡುಗೆಗಳನ್ನು ಸಮಾಜದ ಸರ್ವ ರಂಗಕ್ಕೂ ನೀಡುವಂತಾಗಲಿ ಎಂಬುದಾಗಿ ಅಭಿನಂದನೆ ಸಲ್ಲಿಸೋಣ.





Post a Comment

1 Comments

  1. Very nice article. Congratulations dear Mark Denis Dsouza.

    ReplyDelete