ಆದರೆ ಸುಂದರ ದಾಂಪತ್ಯ ಎನ್ನುವುದು ಅದೃಷ್ಟ ಎನ್ನುವುದಕ್ಕಿಂತ ಇಬ್ಬರ ಗುಣಗಳು ಹಾಗೂ ಅವರಿಬ್ಬರ ನಡುವಿನ ಹೊಂದಾಣಿಕೆ ಎಂಬುವುದು ಮುಖ್ಯವಾಗಿರುತ್ತದೆ. ಇಂತಹ ಯಶಸ್ವಿ ದಾಂಪತ್ಯದ ಮೂಲಕ ಸಮಾಜಕ್ಕೆ ಮಾದರಿಯಾದವರು ಎಣ್ಮಕಜೆ ಗ್ರಾಮ ಪಂಚಾಯತಿಗೊಳಪಟ್ಟ ಬೊಲ್ಕಿನಡ್ಕದ ಥೋಮಸ್ ಡಿಸೋಜ- ತೇರೆಸಾ ಡಿ.ಸೋಜ ದಂಪತಿಗಳು ಇದೀಗ 50ನೇ ವೈವಾಹಿಕ ಬದುಕಿನ ವರ್ಷ ಆಚರಣೆಯ ಸಂಭ್ರಮದಲ್ಲಿದ್ದಾರೆ.
ಗ್ರಾಮೀಣ ಪ್ರದೇಶವಾದ ಬೊಲ್ಕಿನಡ್ಕದಲ್ಲಿ ಪ್ರಗತಿಪರ ಕೃಷಿ ಕಾಯಕದ ಮೂಲಕ ಕಷ್ಟ ಸಂಕಷ್ಟದ ನಡುವೆಯೂ ಸತತ ಪರಿಶ್ರಮ,ಸರಳ ಸಜ್ಜನಿಕೆ, ಸ್ನೇಹಪರ ವ್ಯಕ್ತಿತ್ವದಿಂದ ಸಾಮುದಾಯಿಕ ನಾಯಕರಾಗಿ ಮೂಡಿ ಬಂದ ಇವರ ಜೀವನಾನುಭವಗಳು ಆದರ್ಶನೀಯ.
21.5.1970ರಂದು ವೈವಾಹಿಕ ಬದುಕಿಗೆ ಕಾಲಿರಿಸಿದ ಈ ದಂಪತಿಗಳು ಬದುಕಿನ ಉದ್ದಗಲಕ್ಕೂ ಪರಸ್ಪರ ಪ್ರೀತಿ- ಸ್ನೇಹ,ಆನ್ಯೋನ್ಯತೆಯಿಂದ ಬದುಕುವ ಕಲೆಯನ್ನು ಕರತಲಾಮಲಕವಾಗಿಸಿ ಯಶಸ್ವಿಯಾದ ದಂಪತಿಗಳಾಗಿದ್ದಾರೆ. ಬೇಸಾಯ, ತೋಟಗಾರಿಕೆ, ಮಲ್ಲಿಗೆ ಕೃಷಿ ಕಾಯಕದ ಜತೆಗೆ ಹೈನುಗಾರಿಕೆ ಇನ್ನಿತರ ಪ್ರಗತಿಪರ ಕಾಯಕವನ್ನು ನಡೆಸಿಕೊಂಡು ಬಂದಿರುವ ಈ ದಂಪತಿಗಳು ತಾವು ಗಳಿಸಿದ ಸಂಪತ್ತನ್ನು ಕೈಲಾದ ರೀತಿಯಲ್ಲಿ ಸಮಾಜಕ್ಕೆ ಕೊಡುಗೆಯಾಗಿಸಲು ಶ್ರಮಿಸಿದವರು.
ತಮ್ಮ ಶಿಕ್ಷಣ ಅಲ್ಪವಾದರೂ ವಿದ್ಯೆಯಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ಮನನ ಮಾಡಿದ ಇವರು ತಮ್ಮ ಮಕ್ಕಳಾದ ರಾಜು, ಪ್ರಕಾಶ್, ಸುರೇಶ್ ,ಅಮೃತ್ ಲಾಲ್, ಸಿಸ್ಟರ್ ದಿವ್ಯ ಪ್ರಪುಲ್ಲ, ಫಾದರ್ ಸಿರಿಲ್ ಪ್ರದೀಪ್, ರೀನಾ ಸರಿತ ಅವರಿಗೆ ಪೂರಕ ಶಿಕ್ಷಣ ನೀಡಿ ಒರ್ವರನ್ನು ಧರ್ಮ ಭಗಿನಿ ಹಾಗೂ ಇನ್ನೊರ್ವರನ್ನು ಧರ್ಮಗುರುಗಳನ್ನಾಗಿಸಿ ಸಮಾಜಕ್ಕೆ ಕೊಡುಗೆಯಾಗಿಸಿದ್ದಾರೆ.
ಎರಡು ದೇಹ ಒಂದು ಮನಸ್ಸು, ಮೇಡ್ ಫಾರ್ ಈಚ್ ಅಧರ್ ಎಂಬಂತೆ ಈ ದಂಪತಿಗಳ ಗುಣ, ನಡತೆ, ತಾಳ್ಮೆ, ಮುಗ್ಧತೆ, ನೇರ ನುಡಿ, ಕಾಳಜಿ ಎಲ್ಲವೂ ಸಮಾಜಕ್ಕೆ ಮಾದರಿಯಾದ ಗುಣಗಳಾಗಿದೆ.
ಸುಖ ದಾಂಪತ್ಯ ಎಂದರೆ ಅಲ್ಲಿ ಮಕ್ಕಳಿದ್ದರೇ ಚೆನ್ನ. ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳಿಂದಾಗಿ ಅಲ್ಲೊಂದು ಉತ್ಸಾಹ, ಮಗ್ಧತೆ, ನಗೆಯ ಬುಗ್ಗೆ, ಕಲವರ ಇದ್ದೇ ಇರುತ್ತದೆ. ಎಲ್ಲ ಕಷ್ಟ, ಸಂಕಟ, ನೋವುಗಳನ್ನೆಲ್ಲಾ ಮರೆಸುವ, ಮನಸ್ಸುಗಳಿಗೆ ಬದುಕಿನಲ್ಲಿ ಚೈತನ್ಯ ನೀಡುವ ಶಕ್ತಿ ಇಂತಹ ಕುಟುಂಬಕ್ಕೆ ಇದೆ ಎಂಬುದನ್ನು ನಿರೂಪಿಸಿ ಮಾದರಿಯಾಗಿ ಅವಿಭಕ್ತ ಕುಟುಂಬದ ಸಾರಥಿಗಳಾದ ಈ ದಂಪತಿಗಳ ಬದುಕು ಸದಾ ಹಸನಾಗಿರಲಿ ಎಂಬುದೇ ಈ ಸಂದರ್ಭದಲ್ಲಿ ವಿಶೇಷ ಹಾರೈಕೆ.

1 Comments
Thank you sir, Detailed description about our beloved parents, they deserve it, May God bless your noble task.
ReplyDelete