ದುಬಾಯಿ ಯಕ್ಷಗಾನ ಅಭ್ಯಾಸ ತರಬೇತಿ (DYAT) ಬಗ್ಗೆ 3ನೇ ಸರಣಿ ಲೇಖನ/ವಿದೇಶ_ವಿಶೇಷ 27

 


                          ವಿದೇಶ_ವಿಶೇಷ 27

ವಾಚಕರೇ,

ಕೊಲ್ಲಿ ರಾಷ್ಟ್ರದಲ್ಲಿ ಕರಾವಳಿ ಕರ್ನಾಟಕದ ಯಕ್ಷಗಾನದ ಕಂಪನ್ನು ಪಸರಿಸಿತ್ತಾ ಹಳೆಯ ಕಲಾವಿದರೊಂದಿಗೆ ಹೊಸ ಹೊಸ ಪ್ರತಿಭೆಗಳನ್ನು ಕಲಾರಂಗಕ್ಕೆ ನೀಡುತ್ತಿರುವ ದುಬಾಯಿ ಯಕ್ಷಗಾನ ಅಭ್ಯಾಸ ತರಬೇತಿ (DYAT) ಬಗ್ಗೆ ವಿದೇಶ ವಿಶೇಷ ಸಂಚಿಕೆ ಮೂಲಕ ಸರಣಿ ರೂಪದಲ್ಲಿ ಪ್ರಕಟಿಸುತ್ತಿದ್ದು.ಇದೀಗ 3ನೇ ಸರಣಿ ಲೇಖನ ನಿಮ್ಮ ಮುಂದಿದೆ. ಓದಿ ಪ್ರೋತ್ಸಾಹಿಸಿ.

ಕಲಾವಿದರು ಮತ್ತು ತರಗತಿಯ ಅಭ್ಯಾಸಿ ಕಲಾವಿದರ ಪರಿಚಯ ಭಾಗ 3


           ನ್ಯೋಮಿ  ಸಾಯಿನಾಥ ಶೆಟ್ಟಿ

ಅತೀ ಸಣ್ಣ ಪ್ರಾಯದಲ್ಲಿ ಯಕ್ಷಗಾನದ ನಾಟ್ಯ ಕಲಿತುಕೊಂಡು ಅದನ್ನು ರಂಗಸ್ಥಳದಲ್ಲಿ ಪ್ರದರ್ಶಿಸುವ ಮೂಲಕ ಸಾಧನೆಗೈದ ಬಾಲ ಪ್ರತಿಭೆ ನ್ಯೋಮಿಸಾಯಿನಾಥ ಶೆಟ್ಟಿಯವರು 2015 ನವೆಂಬರ್ 14

ರಂದು ಸಾಯಿನಾಥ್ ವಿಠಲ್ ಶೆಟ್ಟಿ - ಪ್ರತಿಮಾ ಶೆಟ್ಟಿ ದಂಪತಿಗಳಿಗೆ ಮಗಳಾಗಿ ಜನಿಸಿದರು. ಪ್ರಸ್ತುತ ಕೆಜಿ 1 ಶಿಕ್ಷಣ ಪೂರ್ತಿಗೊಳಿಸಿದ್ದಾರೆ. ಶಿಕ್ಷಣದ ಜತೆಗೆ ಯಕ್ಷಗಾನದಲ್ಲೂ ತರಬೇತು ಪಡೆಯಬೇಕೆಂಬ ಉತ್ಸಾಹದಿಂದ ದುಬೈಯ ಯಕ್ಷಗಾನ ಅಭ್ಯಾಸ ತರಬೇತಿಗೆ ಸೇರಿದ್ದಾರೆ. 2019 ಎಪ್ರಿಲ್ ನಿಂದ ಶೇಖರ್ ಡಿ. ಶೆಟ್ಟಿಗಾರ್ ಹಾಗೂ ಶರತ್ ಅವರಿಂದ ನಾಟ್ಯ, ಭಾಗವತಿಕೆಗಳನ್ನು ಕಲಿಯುತ್ತಿದ್ದಾರೆ. 


ಈಗಾಗಲೇ 
ಮಹಿಷಮರ್ದಿನಿ ಜಗಜ್ಜನನಿ ಪ್ರಸಂಗದ ಯಕ್ಷಗಾನದಲ್ಲಿ ಕೋಡಂಗಿ ವೇಷ ಧರಿಸಿದ್ದು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಿಕ್ಷಣ, ಯಕ್ಷಗಾನದ ಜೊತೆಗೆ ಬಾಲಿವುಡ್ ಡ್ಯಾನ್ಸ್ ಸ್ವಯಂ ಪರಿಶ್ರಮದಿಂದ- ಯೂಟ್ಯೂಬ್ ಮೂಲಕ ಅಭ್ಯಾಸ ಮಾಡುತ್ತಿದ್ದಾರೆ. ಸ್ವತಃ ತನ್ನ ಅಜ್ಜಿಯ ಮೂಲಕ ಕನ್ನಡ ಭಜನೆ ಹಾಡನ್ನು ಕಲಿಯುತ್ತಿದ್ದಾರೆ. ದುಬೈ ವರಮಹಾಲಕ್ಷ್ಮಿ ಸಮಿತಿಯವರ ವತಿಯಿಂದ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿಕೊಂಡಿದ್ದಾರೆ. ಇನ್ನಷ್ಟು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಉತ್ತಮ ಕಲಾವಿದೆಯಾಗಬೇಕು ಅದಕ್ಕಾಗಿ ನಿರಂತರ ಅಭ್ಯಾಸವನ್ನು ಮಾಡುವ ಈ ಬಾಲ ಕಲಾವಿದೆಗೆ ಶುಭ ಹಾರೈಸೋಣ.

                     ವಿವನ್ ಬಾಲಕೃಷ್ಣ ಶೆಟ್ಟಿ


ಬಾಲಕೃಷ್ಣ ಶೆಟ್ಟಿ- ಸೌಮ್ಯ ಬಾಲಕೃಷ್ಣ ಶೆಟ್ಟಿ ದಂಪತಿಯರ ಪುತ್ರನಾಗಿ 2011 ಡಿಸೆಂಬರ್ 23ರಂದು ಜನಿಸಿದ ವಿವನ್ ಪ್ರಸ್ತುತ ಗ್ರೇಡ್-೩ರ ವಿದ್ಯಾರ್ಥಿಯಾಗಿದ್ದಾನೆ. ಇವರ ಕುಟುಂಬದಲ್ಲಿ ಯಕ್ಷಗಾನ ಕಲಾವಿದರು ಇಲ್ಲದಿದ್ದರೂ ಹೆತ್ತವರ ಪೂರ್ಣ ಬೆಂಬಲದೊಂದಿಗೆ ಯಕ್ಷಗಾನ ಕಲಿಕೆಯನ್ನು 
ತನ್ನ ಹವ್ಯಾಸ ಒಂದು ಭಾಗವಾಗಿ ಆಯ್ದುಕೊಂಡಿದ್ದಾನೆ. 2019 ಏಪ್ರಿಲ್‌ನಲ್ಲಿ ಯಕ್ಷಗಾನ ಅಭ್ಯಾಸ ತರಗತಿಗೆ ಸೇರಿ ನಾಟ್ಯಗುರು ಶೇಖರ ಡಿ. ಶೆಟ್ಟಿಗಾರರಿಂದ, ಶರತ್ ಕುಡ್ಲರಿಂದ ಹೆಜ್ಜೆಗಾರಿಕೆ ಅಭ್ಯಾಸ ಮಾಡುತ್ತಿದ್ದಾರೆ. ಪಟ್ಲ ಸಂಭ್ರಮದ ಯಕ್ಷಗಾನ ಮಹಿಷಮರ್ದಿನಿ ಜಗಜ್ಜನನಿ ಪ್ರಸಂಗದ ಪ್ರದರ್ಶನದಲ್ಲಿ ಪೂರ್ವರಂಗದ ಕೋಡಂಗಿ ವೇಷ ಮಾಡಿ ರಂಗ ಪ್ರವೇಶ ನಂತರ ಈಗ ಭಾರ್ಗವ ವಿಜಯದಲ್ಲಿ 'ವಸು‛ ಪಾತ್ರಕ್ಕೆ ಅಭ್ಯಾಸ ಮಾಡುತ್ತಿದ್ದಾರೆ. 


ಯಕ್ಷಗಾನದ ಜೊತೆಗೆ ವಿಜಯಾ ಹಾಗೂ ಪ್ರಸನ್ನ ಅವರಿಂದ ಬಾಲಿವುಡ್ ಡ್ಯಾನ್ಸ್ ಕಲಿತುಕೊಂಡಿದ್ದು, ಕ್ರೀಡೆ ಹಾಗೂ 
ಡ್ರಾಯಿಂಗ್ನಲ್ಲೂ ಕೈ ಚಳಕ ಹೊಂದಿದ್ದಾನೆ.2016ರಲ್ಲಿ ದುಬಾಯಿಯಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆಯಂದು ಆಯೋಜಿಸಿದ ಫ್ಯಾನ್ಸಿ ಡ್ರೆಸ್ ಸ್ಫರ್ಧೆಯಲ್ಲಿ ದ್ವಿತೀಯ 2018ರಲ್ಲಿ ಬಂಟ್ಸ್ ಪ್ರಿನ್ಸ್ ಆ್ಯಂಡ್ ಪ್ರಿನ್ಸೆಸ್ ಕಂಟೆಸ್ಟ್ ನಲ್ಲಿ ಬೆಸ್ಟ್ ಟ್ರೆಡಿಶನಲ್ ಅವಾರ್ಡ್, 2016ರಲ್ಲಿ ಬಂಟ್ಸ್ ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್‌ನಲ್ಲಿ ತೃತೀಯ ಬಹುಮಾನ ಗಳಿಸಿದ ವಿವನ್ 2015ರಿಂದ 2019ರ ಕಾಲಾವಧಿಯೊಳಗೆ ಹಲವಾರು ವೇದಿಕೆಗಳಲ್ಲಿ ವೈವಿಧ್ಯಮಯ ನೃತ್ಯ ಪ್ರದರ್ಶಿಸಿದ್ದಾನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗೈಯ್ಯುವ ಪೂರ್ಣ ಭರವಸೆ ಇವನದ್ದಾಗಿದೆ. ಈಗಾಗಲೇ ಒಂದು ವರ್ಷದಿಂದ ತರಬೇತಿಯನ್ನು ಪಡೆಯುತ್ತಿರುವ ನಾನು ಯಕ್ಷಗಾನದ ಅತಿ ದೊಡ್ಡ ಆರಾಧಕನೆಂದು ತಿಳಿಸುತ್ತಾನೆ. ಈ ಅತ್ಯಾಕರ್ಷಕ ಕಲೆ ಆತ್ಮಬೋಧಕ ಕಥನ ಕಲೆ, ಚಿತ್ತಾಕರ್ಷಕ ವೇಷಭೂಷಣ-ಮುಖವರ್ಣಿಕೆ, ಮತ್ತದರ ಅಷ್ಟೇ ಸತ್ವಪೂರ್ಣ ಸಂಭಾಷಣೆ,ಮುಖಾಭಿನಯಮುದ್ರೆಗಳು, ಆ ಬೆಳಕಿನ ಆಟ ಕಣ್ಣಿಗದು ಹಬ್ಬದೂಟ ಎಂದು ಹೇಳುವ ಜೊತೆಗೆ, ಇಂತಹ ಎಲ್ಲ ಸಂಗೀತ, ನಾಟ್ಯ ಇತ್ಯಾದಿ ಎಲ್ಲಾ ಕಲೆಗಳನ್ನು ಒಳಗೊಂಡ ಸರ್ವಾಂಗ ಸುಂದರ ಕಲೆ ನಮ್ಮ ಯಕ್ಷಗಾನ ಮನರಂಜನೆಯ ಜೊತೆ ಜೊತೆಗೆ ನಮ್ಮ ಸನಾತನ ಭಾರತೀಯ ಸಂಸ್ಕೃತಿಯನ್ನು ಕಲಿಸಿಕೊಡುತ್ತದೆ ಎಂಬುದು ಈತನ ಮತ್ತಿವನ ಹೆತ್ತವರ ಸ್ಪಷ್ಟ ನಿಲುಮೆ.

                    ಶ್ರೀ ಶಾ ಪೂಜಾರಿ


ಪ್ರಭಾಕರ ಪೂಜಾರಿ ಮತ್ತು ಅಮೃತ ಪ್ರಭಾಕರ ಪೂಜಾರಿ ದಂಪತಿಯರ ಮಗಳಾಗಿ 2006 ಜುಲೈ 10
ರಂದು ಹುಟ್ಟಿದ ಶ್ರೀಶಾ ಪೂಜಾರಿ ತನ್ನ ಹತ್ತನೇ ಹರೆಯದಲ್ಲೇ ಯಕ್ಷಗಾನ ರಂಗದಲ್ಲಿ ಬಣ್ಣ ಹಚ್ಚಿದ್ದಾರೆ. ಪ್ರಸ್ತುತ ಆರನೇ ತರಗತಿಯಲ್ಲಿ ವ್ಯಾಸಂಗ ಗೈಯುತ್ತಿರುವ ಈಕೆ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಅವರಿಂದ ನಾಟ್ಯಭ್ಯಾಸ ಮಾಡುತ್ತಿದ್ದು ಜೊತೆಗೆ ಭಾಗವತಿಕೆಯ ಜೊತೆ ಹಿಮ್ಮೇಳವನ್ನೂ ಅಭ್ಯಾಸಿಸುತ್ತಿದ್ದಾರೆ. ಮಹಿಷಮರ್ಧಿನಿ ಜಗಜ್ಜನನಿ ಪ್ರಸಂಗದಲ್ಲಿ ಕೋಡಂಗಿ ವೇಷದ ಮೂಲಕ ರಂಗ ಪ್ರವೇಶ ಮಾಡಿದ್ದಾರೆ. ಪೂರ್ವರಂಗದ ಸಮಗ್ರ ಅರಿವಿನೊಂದಿಗೆ ರಂಗಕ್ರಮಗಳ ಅಭ್ಯಾಸ, 


ಅರ್ಥಗಾರಿಕೆ- ಪುರಾಣ ಮಾಹಿತಿಗಳಲ್ಲಿ ಆಸಕ್ತಿ ಮುಂತಾದ ಧನಾತ್ಮಕ ಅಂಶಗಳಿಂದ ಕೂಡಿ ಸಮಗ್ರ ಅಧ್ಯಯನದ ಒಲವು ಶ್ರೀಶಾ ಭವಿಷ್ಯದಲ್ಲಿ ಉತ್ತಮ ಕಲಾವಿದೆಯಾಗುವ ಭರವಸೆ ಮೂಡಿಸಿದೆ.
ಯಕ್ಷಗಾನ ರಂಗ ಪ್ರಯೋಗದ ಉತ್ಸಾಹದಲ್ಲಿರುವ ಈಕೆ ನಾಟ್ಯ, ಧೀಂಗಿಣ ಕುಣಿತದಲ್ಲಿ ಮತ್ತು ಅರ್ಥಗಾರಿಕೆಗಳನ್ನು ಇನ್ನಷ್ಟು ಉತ್ತಮಗೊಳಿಸಿ ಉತ್ತಮ ಕಲಾವಿದೆಯಾಗುವ ಬಯಕೆ ವ್ಯಕ್ತ ಪಡಿಸುತ್ತಾಳೆ. ಮಾತ್ರವಲ್ಲ ಭಾಗವತಿಕೆ ಕಲಿಯಬೇಕೆಂಬ ಹಂಬಲ ವ್ಯಕ್ತಪಡಿಸುತ್ತಾರೆ. ದುಬಾಯಿ ವರಮಹಾಲಕ್ಶ್ಃಮಿ ಸಮಿತಿಯವರ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಮತ್ತು ಮಲಬಾರ್ ಆಭರಣ ಅಂಗಡಿಯವರ ಚಿತ್ರರಚನೆ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಾಳೆ. ಓದುವಿಕೆ,ಗಾಯನಗಳಲ್ಲಿ ಆಸಕ್ತಿ ಉಳ್ಳ ಈಕೆ ಪ್ರಸನ್ನ ಅವರಿಂದ ನೃತ್ಯ ಅಭ್ಯಾಸವನ್ನೂ ಮಾಡುತ್ತಿದ್ದಾರೆ. ಭವಿಷ್ಯದ ಉತ್ತಮ ಕಲಾವಿದೆ ಯಾಗುವುದರಲ್ಲಿ ಸಂಶಯಗಳಿಲ್ಲ. 

                           ತನಿಶ್ ಪ್ರಕಾಶ್ ಪಕ್ಕಲ


ತನಿಶ್ ಪ್ರಕಾಶ ಪಕ್ಕಲ ಮತ್ತು ದಿವ್ಯ ಪ್ರಕಾಶ ಪಕ್ಕಲ ದಂಪತಿಗಳ ಮಗನಾಗಿ 23.03.2010 ರಂದು 
ಜನಿಸಿದರು. ಐದನೇ ತರಗತಿಯಲ್ಲಿ ಓದುತ್ತಿರುವ ತನಿಶ್ ಯಕ್ಷಗಾನದಲ್ಲಿ ಬಹಳ ಅಭಿರುಚಿಯನ್ನು ಹೊಂದಿದ್ದಾನೆ. 2016 ರಲ್ಲಿ ದುಬೈಯ ಯಕ್ಷಗಾನ ಅಭ್ಯಾಸ ತರಗತಿಯನ್ನು ಸೇರಿಕೊಂಡ ಈತನು ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಮತ್ತು ಶರತ್ ಕುಡ್ಲರಿಂದ ನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾನೆ. ಮಾತ್ರವಲ್ಲದೇ ಬಾಲಿವುಡ್ ನೃತ್ಯ, ಪುಟ್ಬಾಲ್ ಆಟ ಮತ್ತು ಕ್ರಿಕೆಟ್ ಈತನ ಅಚ್ಚುಮೆಚ್ಚಿನ ವಿಷಯವಾಗಿದ್ದು, ಬಾಲಿವುಡ್ ನೃತ್ಯವನ್ನು 2015 ರಿಂದ ಗುರುಗಳಾದ ವಿಜಯ್ ಎಚ್.ಜೋಗಿಯವರಿಂದ ಅಭ್ಯಾಸ ಮಾಡುತ್ತಿದ್ದಾನೆ. ತನ್ನ ೪ನೇ ವಯಸ್ಸಿನಲ್ಲಿ ಕೋಟಿ ಚೆನ್ನಯ್ಯ ಹಾಗೂ ಕೃಷ್ಣ ವೇಷದ ಪಾತ್ರದಲ್ಲಿ ಜನರ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದಾನೆ. ಛದ್ಮವೇಷ ಸ್ಪರ್ಧೆ, ಭಜನೆ ಹಾಗೂ ತುಳು ಭಾಷಣ ಸ್ಪರ್ಧೆಯಲ್ಲಿ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾನೆ. ಯು.ಎ.ಇ ಲಿಟ್ಲ್ ಪ್ರಿನ್ಸ್ ಸ್ಪರ್ಧೆಯಲ್ಲಿ ಎರಡನೇ ರನ್ನರ್‌ಆಪ್ ಬಿರುದು ಪಡೆದಿರುತ್ತಾನೆ. 6 ವರ್ಷಗಳಿಂದ ಯಕ್ಷಗಾನ ಅಭ್ಯಾಸದಲ್ಲಿ ತನ್ನನ್ನು ತೊಡಗಿಸಿಕೊಂಡ ತನಿಶ್ ದುಬಾಯಿಯ ವಿವಿಡೆದೆಯಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರಸಂಗದಲ್ಲಿಯೂ ಪಾಲ್ಗೊಂಡಿದ್ದಾನೆ. 


ದೇವಿ ಮಹಾತ್ಮೆ ಪ್ರಸಂಗದಲ್ಲಿ ‘ಬಾಲ­ ಗೋಪಾಲ­ -ಕೋಡಂಗಿಯಾಗಿ’, ತರಣಿಸೇನ ಕಾಳಗದಲ್ಲಿ ‘ವಾನರ ಸೇನೆ’ಯಾಗಿ, ಮಣಿಕಂಠ ಮಹಿಮೆ ಪ್ರಸಂಗದಲ್ಲಿ ಶಿವಗಣವಾಗಿ, ಪಾಂಚಜನ್ಯ ‘ಮಣಿಕರ್ಣ’ ನಾಗಿ, ಮಹಿಷಮರ್ದಿನಿ ಜಗಜ್ಜನನಿ ಪ್ರಸಂಗದಲ್ಲಿ ಅಗ್ನಿಯಾಗಿ, ಚಕ್ರೇಶ್ವರ ಪರೀಕ್ಷಿತದಲ್ಲಿವನಪಾಲಕರಾಗಿ,ಮತ್ತು ಮಂಗಳೂರಿನ ಪಟ್ಲ ಸಂಭ್ರಮದಲ್ಲಿ ಭಾಗವಹಿಸಿದ ಮಕ್ಕಳ ತಂಡದ ಮೂಲಕ ಮೋಹಿನಿ ಏಕಾದಶಿಯಲ್ಲಿ ವನಪಾಲಕ ಪಾತ್ರದ ಮೂಲಕ ಜನರ ಮೆಚ್ಚುಗೆಯನ್ನು ಗಳಿಸಿದ್ದಾನೆ. ಈತನ ಮುಂದಿನ ಭವಿಷ್ಯ ಶುಭಕರವಾಗಿರಲಿ ಎಂದು ಹಾರೈಸೋಣ.

                           ನೀಲೇಶ್ ನಾರಾಯಣ್ ಶೆಟ್ಟಿ


ನಾರಾಯಣ್ ಶೆಟ್ಟಿ - ಹೇಮಾಲತಾ ಶೆಟ್ಟಿ ದಂಪತಿಯ ಪುತ್ರನಾಗಿ 2005 ಆಗಸ್ಟ್ 13 ರಂದು 
ಜನಿಸಿದ ಇವರು ಹತ್ತನೇ ತರಗತಿ ಗ್ರೇಡ್ ಶಿಕ್ಷಣ ಪೂರ್ತಿಗೊಳಿಸಿದ್ದಾರೆ. ಶಿಕ್ಷಣ ಪಡೆಯುತ್ತಿದ್ದಂತೆಯೇ ಈತನನ್ನು ಯಕ್ಷಗಾನ ಕಲೆ ಆಕರ್ಷಿಸತೊಡಗಿತು. 


ಇದರಂತೆ ಅದನ್ನು ಕೂಡಾ ಜೀವನದ ಒಂದು ಭಾಗವಾಗಿ 
ಅಳವಡಿಸಿಕೊಳ್ಳಬೇಕೆಂಬ ಹುಮ್ಮಸ್ಸಿನಿಂದ ದುಬೈಯ ಯಕ್ಷಗಾನ ಅಭ್ಯಾಸ ತರಗತಿಗೆ ಸೇರಿಕೊಂಡನು. 2018 ರಲ್ಲಿ ಶೇಖರ್ ಡಿ. ಶೆಟ್ಟಿಗಾರ್‌ರಿಂದ ಮತ್ತು ಶರತ್ ಕುಡ್ಲರಿಂದ ನಾಟ್ಯವನ್ನು ಕಲಿತುಕೊಂಡಿದ್ದಾರೆ. ಅಲ್ಲದೆ ಮದ್ದಳೆ ಕಲಿಕೆಯಲ್ಲೂ ಉತ್ತಮ ಆಸಕ್ತಿ ತೋರಿ ಮುಂದುವರಿಯುತ್ತಿದ್ದಾನೆ. ಈಗಾಗಲೇ ಪೂರ್ವರಂಗ ಅಭ್ಯಾಸ ಮಾಡಿ ಬಾಲಗೋಪಾಲ ಮತ್ತು ಹೊಗಳಿಕೆ ಹಾಸ್ಯದಲ್ಲಿ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಮಹಿಷಮರ್ಧಿನಿಯಲ್ಲಿ ಕುಬೇರನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಯಕ್ಷಗಾನ ರಂಗದಲ್ಲಿ ಇನ್ನಷ್ಟು ಸಾಧನೆಗೈಯಬೇಕೆಂಬ ಆಸಕ್ತಿ ಈತನದ್ದಾಗಿದೆ ಮಾತ್ರವಲ್ಲ ಒಬ್ಬ ಉತ್ತಮ ಯಕ್ಷಗಾನ ಕಲಾವಿದನಾಗಬೇಕೆಂಬ ಹೆಬ್ಬಯಕೆ ಈತನಿಗೆ. ಯಕ್ಷಗಾನ ಅಭ್ಯಾಸ ತರಗತಿಯೊಂದಿಗಿನ ತನ್ನ ಪಯಣದ ಬಗ್ಗೆ ಬಹಳ ಆನಂದದಿಂದ ಹೇಳಿಕೊಳ್ಳುತ್ತಾನೆ. ತುಂಬಾ ಚೆನ್ನಾಗಿ ಸಾಗಿದ ತರಗತಿಯ ಪಯಣದಲ್ಲಿ ಬಹಳಷ್ಟು ಕಲಿಯುವುದಕ್ಕೆ ಅವಕಾಶವಾಗಿದೆ, ಸದಾ ನನ್ನ ಬೆಂಬಲಕ್ಕೆ ನಿಲ್ಲುವ ಗುರುಗಳು, ಅಗತ್ಯ ಸಂದರ್ಭ- ಅಭ್ಯಾಸಕ್ಕೊದಗುವ ತೊಡಕುಗಳನ್ನು ಪರಿಹರಿಸುವುದಕ್ಕೆ ಒದಗಿಬರುವ ಅವರಿಗೆ ಸದಾ ನಾನು ಕೃತಜ್ಞ ಎನ್ನುತ್ತಾನೆ.



             ಅಪೂರ್ವ ದುರ್ಗಾದಾಸ್ ಶೆಟ್ಟಿಗಾರ್ 

ಶ್ರೀಯುತ ದುರ್ಗಾದಾಸ್ ಅಪ್ಪು ಶೆಟ್ಟಿಗಾರ್ ಮತ್ತು ಶ್ರೀಮತಿ ಇಂದಿರಾ ದುರ್ಗಾದಾಸ್ ಶೆಟ್ಟಿಗಾರರ ಪುತ್ರಿ. ಅಭ್ಯಾಸ ತರಗತಿಯ ವಿದ್ಯಾರ್ಥಿಯಾಗಿ ಪಾಂಚಜನ್ಯದ ಪೀಠಿಕೆ ವೇಷ - ಒಡ್ಡೋಲಗ, ಸಭಾಕಲಸು ಸಹಿತ ವರುಣನ ಪಾತ್ರ ನಿರ್ವಹಿಸಿ ಪ್ರಥಮ ಪ್ರದರ್ಶನದಲ್ಲೇಮೆಚ್ಚುಗೆ ಗಳಿಸಿದ ಪರಿಶ್ರಮಿ. ಶಿವಗಣ, ದೇವತೆ ಪಾತ್ರಗಳನ್ನೂ ಮಾಡಿರುವ ಈಕೆಯ ಕುಟುಂಬ ಊರಲ್ಲಿ ನೆಲೆನಿಂತ ಕಾರಣ ಅಒಂ –ವಾಣಿಜ್ಯ ಶಾಸ್ತç ವ್ಯಾಸಂಗದ ಜೊತೆ ಯಕ್ಷಗಾನ ಅಭ್ಯಾಸವನ್ನೂ ಊರಲ್ಲಿ, ಗುರುಗಳಾದ ರಾಕೇಶ್ ರೈ ಅಡ್ಕರಲ್ಲಿ ಮುಂದುವರಿಸುತ್ತಿದ್ದಾರೆ. ಊರಿಗೆ ಹೋದ ಮೇಲೂ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. 


ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆಯ ದಾರಿಕಾಸುರ ಮಾತ್ರವಲ್ಲದೆ, 
ದ್ರೋಣಾಚಾರ್ಯ, ಮುಚುಕುಂದ ಇತ್ಯಾದಿ ಪಾತ್ರಗಳಲ್ಲಿ ಮಿಂಚಿ ದೊಡ್ಡ ಕಲಾವಿದರಾಗುವ ನಿರೀಕ್ಷೆ ಹುಟ್ಟಿಸಿದ್ದಾರೆ. ಪೂತನಿ ಪಾತ್ರಕ್ಕಾಗಿ ಮೆಚ್ಚುಗೆಯ ಪ್ರಶಸ್ತಿ ಪಡೆದಿದ್ದಾರೆ. ವಿವಿಧ ನೃತ್ಯ ಪ್ರಕಾರಗಳ ಅಭ್ಯಾಸ ಪ್ರದರ್ಶನದಲ್ಲಿ ಭಾಗವಹಿಸಿರುವ ಇವರು ಅನೇಕ ಪ್ರದರ್ಶನಗಳಿಗೆ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.


                           ಅಶೋಕ್ ಶೆಟ್ಟಿ ಕಾರ್ಕಳ 

ಅಶೋಕ್ ಶೆಟ್ಟಿಯವರು 27.03.1988 ರಂದು ರಮೇಶ್ ಶೆಟ್ಟಿ ಮತ್ತು ಜಯಂತಿ ಶೆಟ್ಟಿ ದಂಪತಿಗಳ ಮಗನಾಗಿ ಜನಿಸಿದರು. ಅಕೌಂಟಿಗ್ಸ್ ಮತ್ತು ಫೈನಾನ್ಸ್ನಲ್ಲಿ ಮಾಸ್ಟರ್ ಪದವಿಯನ್ನು ಪೂರ್ಣಗೊಳಿಸಿದ ಇವರು ಅಲ್ ಬರಕಹಾ ಹೊಲ್ಡಿಂಗ್ ಕಂಪೆನಿಯಲ್ಲಿ ಖಜಾನೆ ತಜ್ಞನಾಗಿ ಕರ‍್ಯ ನಿರ್ವಹಿಸುತ್ತಿದ್ದಾರೆ. 

ಯಕ್ಷಗಾನದಲ್ಲಿ ಒಲವನ್ನು ಹೊಂದಿದ್ದ ಇವರು 2017 ರಲ್ಲಿ ಯಕ್ಷಗಾನ ಅಭ್ಯಾಸ ತರಗತಿಗೆ ಸೇರಿಕೊಂಡರು. ನಾಟ್ಯ, ಭಾಗವತಿಕೆ ಮತ್ತು ಹಿಮ್ಮೇಳವನ್ನು ಯಕ್ಷಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್‌ರ ಬಳಿ ಅಭ್ಯಾಸ ಮಾಡುತ್ತಿದ್ದಾರೆ. ತನ್ನ ಪ್ರತಿಭೆಯನ್ನು ರಂಗದಲ್ಲಿ ತೋರಿಸಿದ ಇವರು 2017 ರಲ್ಲಿ ಚಕ್ರೇಶ್ವರ ಪರೀಕ್ಷಿತ ಪ್ರಸಂಗದಲ್ಲಿ ‘ಬಾಲ ಗೋಪಾಲ’ನಾಗಿ, 2018 ಶ್ರೀಕೃಷ್ಣಲೀಲೆ ಪ್ರಸಂಗದಲ್ಲಿ ‘ಬಾ­ ಗೋಪಾ­ಲನಾಗಿ, ಜಾಂಬವತಿ ಕಲ್ಯಾಣದಲ್ಲಿ ‘ಮಹಿಷ’ನಾಗಿ ಮತ್ತು ಮಹಿಷಾಮರ್ಧಿನಿ ಜಗಜ್ಜನನಿ ಪ್ರಸಂಗದಲ್ಲಿ 'ಕಾಳಿ’ಯಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 


2018 ರಲ್ಲಿ ದೇವಿ ಮಹಾತ್ಮೆ ತಾಳಮದ್ದಳೆಯಲ್ಲಿ ‘ದುರ್ಗಾಸುರ’ನಾಗಿ ತನ್ನ ಪಾತ್ರವನ್ನು ಮಾಡಿದ್ದಾರೆ. 
2016ರಲ್ಲಿ ನಡೆದ ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ಪಾಲ್ಗೊಂಡ ಅಶೋಕರಿಗೆ ಇದೊಂದು ಮರೆಯಲಾಗದ ನೆನಪು ಎಂದು ಹೇಳಿಕೊಳ್ತಾರೆ. ಯಕ್ಷಗಾನದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ, ಯಕ್ಷಗಾನದ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿದುಕೊಳ್ಳಬೇಕೆಂಬುದು ಇವರ ಹಂಬಲ. ಯಕ್ಷಗಾನ ಮಾತ್ರವಲ್ಲದೇ ನೃತ್ಯ, ನಾಟಕ, ಕ್ರೀಡೆ, ಬ್ಯಾಡ್ಮಿಟನ್, ಫುಟ್‌ಬಾಲ್ ಮತ್ತು ಕ್ರಿಕೆಟ್‌ನಲ್ಲಿಯೂ ಆಸಕ್ತಿಯನ್ನು ಹೊಂದಿದ್ದಾರೆ. ತನ್ನ ಶಾಲಾಭ್ಯಾಸದ ಸಮಯದಲ್ಲಿ ಅನೇಕ ನೃತ್ಯ ಮತ್ತು ಮರಾಠಿ, ಕನ್ನಡ, ಆಂಗ್ಲ ಮತ್ತು ತುಳುಭಾಷೆಗಳ ನಾಟಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ತೋರಿಸಿದ್ದಾರೆ.


                            ಸೀತಾರಾಮ ಶೆಟ್ಟಿ

ತ್ಯಾಂಪಣ್ಣ ಶೆಟ್ಟಿ – ಗಿರಿಜಾ ಶೆಟ್ಟಿ ದಂಪತಿಯರ ಪುತ್ರನಾದ ಸೀತಾರಾಮ್ ಶೆಟ್ಟಿಯವರು 1985 ಮೇ 1 ರಂದು ಜನಿಸಿದರು. ಬಿ.ಕಾಂ. ಪದವೀಧರ 2013ರಿಂದಲೇ ಶೇಖರ್ ಡಿ. ಶೆಟ್ಟಿಗಾರರಲ್ಲಿ ನಾಟ್ಯ ಅಭ್ಯಾಸಕ್ಕೆ ತೊಡಗಿಸಿದ ಇವರು ತದನಂತರ ಯಕ್ಷಗಾನ ಅಭ್ಯಾಸ ತರಗತಿಯ ಸಂಪರ್ಕದಿಂದ ಗುರುಗಳಾದ ಶೇಖರ ಡಿ. ಶೆಟ್ಟಿಗಾರ್ ಹಾಗೂ ಶರತ್ ಕುಮಾರರಿಂದ ನಾಟ್ಯ ಕಲಿಕೆ ಮುಂದುವರಿಸುತ್ತಿದ್ದಾರೆ. ವಾದನ ಕಲೆಯಲ್ಲೂ ಇವರಿಗೆ ಆಸಕ್ತಿ ಇದೆ. 


ಮಾನಿಷಾದ, ಮಣಿಕಂಠ ಮಹಿಮೆ, ತರಣಿಸೇನ ಕಾಳಗ, ಶ್ರೀ ದೇವೀ ಮಹಾತ್ಮ್ಯೆ, ಕಟೀಲು 
ಕ್ಷೇತ್ರ ಮಹಾತ್ಮ್ಯೆ, ಚಕ್ರೇಶ್ವರ ಪರೀಕ್ಷಿತ ಮೊದಲಾದ ಪುರಾಣ ಪ್ರಸಂಗಗಳಲ್ಲಿ ಗಮನಾರ್ಹ ಪಾತ್ರಗಳು ಮಾಡಿದ್ದಾರೆ. ಕ್ರೀಡಾರಂಗಲ್ಲಿ ಸಾಧನೆ ಮಾಡಿದ್ದಾರೆ. ಕ್ರಿಕೆಟ್, ಕಬಡ್ಡಿ ಕ್ರೀಡಾಕೂಟದಲ್ಲಿ ಬಾಗವಹಿಸಿದ್ದಾರೆ.ಅಶ್ವಿನಿ ಇವರ ಪತ್ನಿ, ಪ್ರಿಶಾ ಇವರ ಮಗಳು,ಸುಖೀ ಸಂಸಾರಿ- ಯಾಗಿರುವ ಇವರು ಅಭ್ಯಾಸ ತರಗತಿಯ ಉತ್ತಮ ಕಾರ್ಯಕರ್ತರೂ ಆಗಿದ್ದಾರೆ.


                           ಸತೀಶ್ ಶೆಟ್ಟಿಗಾರ್ ವಿಟ್ಲ

ಸತೀಶ್ ಶೆಟ್ಟಿಗಾರ್ ಪಿ ಅವರು ಕಳೆದ 5-6 ವರ್ಷಗಳಿಂದ ದುಬೈಯ ಯಕ್ಷಗಾನ ಅಭ್ಯಾಸ ತರಗತಿಯಲ್ಲಿ ಯಕ್ಷಗಾನದ ಹಿಮ್ಮೇಳ – ಮುಮ್ಮೇಳಗಳನ್ನು ಅಭ್ಯಸಿಸುತ್ತಿದ್ದಾರೆ.1985 ಜುಲೈ 1ರಂದು ಕೃಷ್ಣ ಶೆಟ್ಟಿಗಾರ್ – ಇಂದಿರಾ ದಂಪತಿಯ ಪುತ್ರರಾಗಿ ಜನಿಸಿದರು. ಎಂ.ಕಾಂ ಪದವಿ ಪೂರ್ತಿಗೊಳಿಸಿದ ಇವರು ಗುರು ಶೇಖರ್ ಡಿ. ಶೆಟ್ಟಿಗಾರ್, ಶರತ್ ಕುಡ್ಲರಿಂದ ನಾಟ್ಯ, ಬಣ್ಣಗಾರಿಕೆ ಕಲಿತು, ಭಾಗವತಿಕೆ, ಹಿಮ್ಮೇಳವನ್ನು ಕೂಡ ಅಭ್ಯಾಸ ಮಾಡುತ್ತಿದ್ದಾರೆ. ಬಣ್ಣದ ವೇಷಗಳಲ್ಲಿ ಇವರಿಗೆ ಹೆಚ್ಚಿನ ಸಿದ್ಧಿ. ಈಗಾಗಲೇ ತರಣಿಸೇನ ಪ್ರಸಂಗದ ನೀಲ, ಪಾಂಚಜನ್ಯದ ಯಮ, ಶ್ರೀಕೃಷ್ಣಲೀಲೆಯ ಶಕಟಾಸುರ, ಮೋಹಿನಿ ಏಕಾದಶಿಯ ಬಲಿ ಚಕ್ರವರ್ತಿ, ಶ್ರೀದೇವಿ ಮಹಾತ್ಮೆಯ ನಿಶುಂಭ ಮೊದಲಾದ ವೇಷಗಳನ್ನು ಯಶಸ್ವಿಯಾಗಿ ಅಭಿನಯಿಸಿದ್ದಾರೆ.


ಇವರ ಕುಟುಂಬದಲ್ಲಿ ಯಕ್ಷಗಾನದಲ್ಲಿ ಹೆಸರು ಗಳಿಸಿದ ಕಲಾವಿದರು ಯಾರೂ ಇಲ್ಲ. ಇವರು ದುಬೈಗೆ ಬಂದಾಗ 
ಅಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನ ನೋಡುತ್ತಾ ತಾನು ಅದೇ ರೀತಿ ವೇಷ ಮಾಡಿ ಕುಣಿಯಬೇಕೆಂಬ ಆಸಕ್ತಿ ಮೂಡಿತೆನ್ನುತ್ತಾರೆ. ಆವಾಗಲೇ ಅಲ್ಲಿನ ಯಕ್ಷಗಾನ ಅಭ್ಯಾಸ ತರಗತಿ ಬಗ್ಗೆ ತಿಳಿದುಕೊಂಡ ಅವರು ಅದನ್ನು ಸೇರಿ ಯಕ್ಷಗಾನದ ವಿವಿಧ ಪ್ರಕಾರಗಳನ್ನೆಲ್ಲಾ ಕಲಿಯಲಾರಂಭಿಸದರು.ಶೇಖರ್ ಡಿ. ಶೆಟ್ಟಿಗಾರ್ ಮತ್ತು ಶರತ್ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಾಟ್ಯ, ಅರ್ಥಗಾರಿಕೆ, ಪ್ರಸಾಧನ, ವಸ್ತಾçಲಂಕಾರಗಳೇ ಮೊದಲಾದ ಯಕ್ಷಗಾನ ಕಲೆಯ ವಿವಿಧ ಅಂಗೋಪಾಂಗಗಳನ್ನು ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿದ್ದಾರೆ. ತಾಳಮದ್ದಳೆ ಅರ್ಥದಾರಿಯಾಗಿಯೂ ಭಾಗವಹಿಸಿದ್ದಾರೆ. ಯಕ್ಷಗಾನದಲ್ಲಿ ವಿಶೇಷವಾಗಿ ನಿಧಾನ ಲಯದ ಬಣ್ಣದ ವೇಷಗಳಿಗೆ ಮನಸೋತು ಹೆಚ್ಚಿನ ಮಹತ್ವ ನೀಡಿ ಬಣ್ಣದ ವೇಷದ ನಡೆ ಪರಂಪರೆಯ ಕ್ರಮಗಳನ್ನು ತಿಳಿದುಕೊಂಡು ಸ್ವತಃ ಮುಖಕ್ಕೆ ಚಿಟ್ಟಿ ಇಟ್ಟು ತನ್ನ ಮುಖವರ್ಣಿಕೆಯನ್ನು ತಾನೇ ಮಾಡುವವರೆಗೆ ಬೆಳೆದಿದ್ದಾರೆ. ಮುಂದೆ ಯಕ್ಷಗಾನದ ಎಲ್ಲಾ 

ಪ್ರಕಾರದ ವೇಷಗಳನ್ನು ಮುಖ್ಯವಾಗಿ ರಾಜವೇಷ ಮತ್ತು ಪುಂಡುವೇಷಗಳನ್ನು ಮಾಡುವ ಇರಾದೆ ಇವರದ್ದು. ಕ್ರೀಡಾ ರಂಗದಲ್ಲೂ ತನ್ನನ್ನು ತೊಡಗಿಸಿಕೊಂಡು ಕ್ರಿಕೆಟ್ ತಂಡದ ಉತ್ತಮ ಕ್ರೀಡಾಳುವಾಗಿ ಹೊರ ಹೊಮ್ಮಿದ್ದಾರೆ.ಬಿಡುವಿನ ವೇಳೆಯನ್ನು ಚಲನಚಿತ್ರ ವೀಕ್ಷಣೆಯ ಹವ್ಯಾಸವನ್ನೂ ಹೊಂದಿದ್ದಾರೆ. ಹೀಗೆ ಎಲ್ಲಾ ರಂಗಗಳಲ್ಲೂ ತನ್ನನ್ನು ಗುರುತಿಸಿಕೊಂಡು ಯಕ್ಷಗಾನದಲ್ಲಿ ಇನ್ನಷ್ಟು ಸಾಧನೆ ಮಾಡುವ ಹಂಬಲ ಇವರದ್ದಾಗಿದೆ


                     ರವೀಂದ್ರ ಕುಕ್ಯಾನ್

ಯಕ್ಷಗಾನ ಅಭ್ಯಾಸ ತರಗತಿಗೆ ಸೇರಿ ಕೇವಲ ಒಂದು ವ಼ರ್ಷದಲ್ಲಿ ನಾಟ್ಯ, ಅಭಿನಯ, ಅರ್ಥಗಾರಿಕೆ, ಭಾಗವತಿಕೆ, ಪ್ರಸಾದನ ಹೀಗೇ ಯಕ್ಷಗಾನದ ಎಲ್ಲಾ ಆಯಾಮಗಳನ್ನು ಕಲಿಯಲು ಉತ್ಸುಕರಾಗಿ, ಬೆಳೆಯುತ್ತಾ, ಪ್ರದರ್ಶನಕ್ಕೆ ಅಣಿಯಾಗುತ್ತಾ ಉತ್ತಮ ಸಾಧನೆಗೈಯುವ ಸಾಧ್ಯತೆಯಿದೆ ಎಂಬುದನ್ನು ಸಾಬೀತುಪಡಿಸಿದವರಲ್ಲಿ ರವೀಂದ್ರ ಕುಕ್ಯಾನ್ ರವರು ಅಭ್ಯಾಸ ತರಗತಿಯ ಅಗ್ರಸ್ಥಾನದ ವಿದ್ಯಾರ್ಥಿಗಳಲ್ಲಿ ಒಬ್ಬರು. 2019ರಲ್ಲಿ ಯಕ್ಷಗಾನ ಅಭ್ಯಾಸ ತರಗತಿಗೆ ಸೇರಿದ ಇವರು ಅರ್ಥಗಾರಿಕೆಯಲ್ಲಿ ಹೆಚ್ಚಿನ ಸಾಧನೆ ಮಾಡುತ್ತಾ ತಾಳಮದ್ದಳೆಯ ಉತ್ತಮ ಅರ್ಥದಾರಿಯಾಗಿ ಈಗಾಗಲೇ ವೇದಿಕೆ ಹಂಚಿಕೊಂಡು ಭರವಸೆ ಮೂಡಿಸಿದ್ದಾರೆ. ಯಕ್ಷಗಾನದ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಇತ್ತು. ಊರಿನಲ್ಲಿ ಯಕ್ಷಗಾನ ವೀಕ್ಷಿಸುತ್ತಿದ್ದ ಇವರಿಗೆ ಕಲೆಯ ಮೇಲೆ ಆಸಕ್ತಿ ಮೂಡುತ್ತಾ ಬಂತು. ಕಲಿಯುವುದಕ್ಕೆ ಹಲವಾರು ಪ್ರಯತ್ನಗಳನ್ನು ಮಾಡಿದ್ದರೂ ಪರಿಸರ ಹಾಗೂ ಪರಿಸ್ಥಿತಿ ಅದಕ್ಕೆ ಪೂರಕವಾಗಿರಲಿಲ್ಲವೆನ್ನುತ್ತಾರೆ. ಉದ್ಯೋಗ ನಿಮಿತ್ತ ದುಬಾಯಿಯಲ್ಲಿ ನೆಲೆಸಿದಾಗ ಕಳೆದ ವರ್ಷ ಅಭ್ಯಾಸ ತರಗತಿ ಬಗ್ಗೆ ತಿಳಿದ ಇವರು ಬೇರೇನೂ ಆಲೋಚಿಸದೆ ಅದಕ್ಕೆ ಸೇರ್ಪಡೆಗೊಂಡು ತನ್ನ ಬಾಲ್ಯದ ಆಸೆಯನ್ನು ಪೂರೈಸಿದ ತುಂಬು ಸಂತೋಷದಲ್ಲಿ ಇವರಿದ್ದಾರೆ.ಸೋಮಪ್ಪ ಕುಕ್ಯಾನ್ – ಜಾನಕಿ ಕೋಟ್ಯಾನ್ ದಂಪತಿಯ ಪುತ್ರನಾದ ರವೀಂದ್ರ ಕುಕ್ಯಾನ್ 1968 ನವೆಂಬರ್ 19ರಂದು ಜನಿಸಿದರು. ಬಿ.ಕಾಂ. ಪದವೀಧರರಾಗಿದ್ದಾರೆ. ಪತ್ನಿ ಶಾಲಿನಿ ಸನಿಲ್, ತ್ರಿವಳಿ ಮಕ್ಕಳಾದ ಕೀರ್ತನ್, ಕಿಶನ್,ಕಿರಣ್ ಅವರೊಂದಿಗೆ ಸಂತೃಪ್ತಿಯ ಜೀವನ ಸಾಗಿಸುತ್ತಿದ್ದಾರೆ.ಜಂಬೋ ಇಲೆಕ್ಟ್ರಾನಿಕ್ಸ್ ನಲ್ಲಿ ಕಳೆದ 23 ವ಼ರ್ಷಗಳಿಂದ ಉದ್ಯೋಗಿಯಾಗಿರುವ ಕುಕ್ಯಾನ್ ರಲ್ಲಿ ದ್ಯಾಟ್ (DAYT)ನೊಂದಿಗೆ ನಿಮ್ಮ ಪಯಣದ ಬಗ್ಗೆ ಹೇಳಿ ಎಂದಾಗ, ‚ಕರಾವಳಿ ಕರ್ನಾಟಕದ ನಮ್ಮೀ ಯಕ್ಷಗಾನ ಕಲೆ ವಿಶ್ವವ್ಯಾಪಿಯಾಗಿ ಬೆಳೆಯುತ್ತಿರುವುದು ನಿಜಕ್ಕೂ ಸಂತೋಷ ತರುವ ವಿಚಾರ. ಯಕ್ಷಗಾನ ಅಭ್ಯಾಸ ತರಗತಿಯಲ್ಲಿ ಭಾಗವಹಿಸಲು ತುಂಬಾ ಹೆಮ್ಮೆ ಎನಸುತ್ತದೆ. ನಮ್ಮ ನಾಡಿನ ಈ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ‛ ಎಂದು ಭರವಸೆಯಾಸೆಗಣ್ಣುಗಳನ್ನು ಅರಳಿಸಿ ನುಡಿಯುತ್ತಾರೆ.


                   ಸ್ವಾತಿ ಶರತ್ ¸ಸರಳಾಯ

ದಿ.ಸತೀಶ್ ಆಚಾರ್ಯ- ಜ್ಯೋತಿ ಆಚಾರ್ಯ ದಂಪತಿಯ ಪುತ್ರಿಯಾದ ಸ್ವಾತಿ ಶರತ್ 1983 ಮಾರ್ಚ್ 28ರಂದು ಜನಿಸಿದರು. ಎಂ.ಬಿ.ಎ. ಪದವೀಧರೆಯಾದ ಇವರ ತಂದೆ ಬಡಗು ತಿಟ್ಟು ಯಕ್ಷಗಾನದಲ್ಲಿ ಹವ್ಯಾಸೀ ಕಲಾವಿದರಾಗಿದ್ದರು. ತಂದೆ ಯಕ್ಷಗಾನದಲ್ಲಿ ಸಾಧನೆಗೈದಿರುವುದೇ ಸ್ವಾತಿ ಶರತರನ್ನು ಈ ದೈವೀಕಲೆಯತ್ತ ಆಕರ್ಷಿಸಿಸಿತೆಂದರೂ ತಪ್ಪಾಗದು. ಕಾಲೇಜು ಶಿಕ್ಷಣದ ವೇಳೆಯಲ್ಲಿಯೇ ನಾಟ್ಯಾಭ್ಯಾಸ- ವೇಷ ಮಾಡಿದ ಅನುಭವ ಈಕೆಯದ್ದು. ಕಳೆದ ಐದು ವರ್ಷಗಳಿಂದ ದುಬಾಯಿಯ ಯಕ್ಷಗಾನ ಅಭ್ಯಾಸ ತರಗತಿಯಲ್ಲಿ ಗುರು ಶೇಖರ್ ಡಿ. ಶೆಟ್ಟಿಗಾರರಿಂದ ಯಕ್ಷಗಾನ ತರಬೇತಿ ಪಡೆಯುತ್ತಿದ್ದಾರೆ.


ಪ್ರಸಿದ್ಧ ಯಕ್ಷಗಾನ ಪ್ರಸಂಗಗಳಾದ ಸುದರ್ಶನ ವಿಜಯದಲ್ಲಿ ಲಕ್ಷ್ಮಿ, ಶ್ರೀ ದೇವಿ 
ಮಹಾತ್ಮ್ಯೆಯಲ್ಲಿ ಮಹಿಷಾಸುರ, ಬ್ರಹ್ಮ, ಕೃಷ್ಣ ಸಂಧಾನದ ಕೃಷ್ಣ, ಭಸ್ಮಾಸುರ ಮೋಹಿನಿಯಲ್ಲಿ ಪಾರ್ವತಿ, ತರಣಿಸೇನ ಕಾಳಗದ ಸರಮೆ, ಪಾಂಚಜನ್ಯದ ಸದ್ಭೋಧಿನಿ ಮುಂತಾದ ಪಾತ್ರಗಳನ್ನು ಇವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.ಯಕ್ಷಗಾನ ತಾಳಮದ್ದಳೆ ಅಲ್ಲದೆ ಸಂಗೀತ, ನೃತ್ಯ, ನಾಟಕ, ಕಾರ್ಯಕ್ರಮ ನಿರೂಪಣೆಯಲ್ಲಿ ತನ್ನ ಸಾಧನೆ ಮೆರೆಯುತ್ತಿದ್ದಾರೆ. ಶಾಲೆ, ಕಾಲೇಜುಗಳಲ್ಲಿ ಯಕ್ಷಗಾನ ಸಹಿತ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಗಳಿಸಿರುತ್ತಾರೆ.ತನ್ನ ಕಲಾ ಜೀವನದ ಸಾಧನೆಯಲ್ಲಿ ಪತಿ ಶರತ್ ಸರಳಾಯರ ಪ್ರೋತ್ಸಾಹ ಬಹಳಷ್ಟಿದೆ. ಸಮಯ, ಅವಕಾಶ ಸಿಕ್ಕಲ್ಲಿ, ಈ ಐದು ವ಼ರ್ಷಗಳಲ್ಲಿ ಸಾಧಿಸಲಾಗದ ಬಹಳಷ್ಟು ಪಾತ್ರ-ಸಿದ್ಧಿಗಳ ಅಭ್ಯಾಸ ಕಷ್ಟ ಸಾಧ್ಯ ಸಾಧನೆಗೈದ ಸಾಧಕರಾಗಬೇಕೆಂಬ ಹೆಬ್ಬಯಕೆ ಇವರದ್ದಾಗಿದೆ. ಕೈಗೂಡಲಿ ಎಂಬುದು ನಮ್ಮಾಶಯವೂ ಆಗಿದೆ.


                                    ಸ್ವಾತಿ ಸಂತೋಷ್

"ಕಟೀ­ಲು"ಎಂಬಭಿಧಾನದಿಂದಲೇ ನಮ್ಮ ಅಭ್ಯಾಸ ತರಗತಿಯ ಸಹಪಾಠಿ ಸಜ್ಜನರಿಂದ ಗುರುತಿಸಲ್ಪಡುವ ಸ್ವಾತಿಯವರ ಹುಟ್ಟೂರು ಯಕ್ಷಕಲಾಮಾತೆಯ ಅನುಗ್ರಹ ಪೀಠ ಕಟೀಲು. 

ಕಟೀಲು ನಿವಾಸಿ ರಾಘವೇಂದ್ರ ಭಟ್- ಆಶಾಭಟ್ ದಂಪತಿಯರ ಪುತ್ರಿಯಾದ ಸ್ವಾತೀ ಸಂತೋಷ್ ಎಂ.ಬಿ.ಎ. ಪದವೀಧರೆಯಾಗಿದ್ದಾರೆ. ಯಕ್ಷಗಾನದಲ್ಲೂ ಸಾಧನೆಗೈಯಬೇಕೆಂಬ ಛಲದಿಂದ ಇವರು ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಗೆ ಸೇರ್ಪಡೆಗೊಂಡರು. ಅಲ್ಲಿನ ಗುರುಗಳಾದ ಶೇಖರ ಡಿ. ಶೆಟ್ಟಿಗಾರ್ ಹಾಗೂ ಶರತ್ ಪೂಜಾರಿ ಅವರಿಂದ ನಾಟ್ಯ ತರಬೇತಿಯನ್ನು ಪಡೆಯುತ್ತಿದ್ದಾರೆ. ಸ್ಪುಟವಾದ ಅಸ್ಖಲಿತ ವಾಗ್ಝರಿ ಇವರಿಗೊದಗಿದ ಜನ್ಮದತ್ತ ಕೊಡುಗೆ. ಕೋಮಲ ಶ್ರುತಿಬದ್ಧ ಶಾರೀರದಿಂದಾಗಿಯೇ ವೇದಿಕೆಯಲ್ಲಿ ಮೆರುಗು ಪಡೆವ ಇವರ ಪಾತ್ರ ಚಿತ್ತಾರ ನೋಟಕರನ್ನು ಮೋಡಿಮಾಡುತ್ತದೆ. ತಕ್ಕಮಟ್ಟಿನ ಸ್ಥೂಲ ಶರೀರವೂ ಜಟ್ಟಿ ಚಲ್ಲಣ-ವಸ್ತ್ರಾಣಭರಣಗಳಿಂದ ತುಂಬಿ ನಿಲ್ಲುವ ಪುರುಷಪಾತ್ರಗಳ ಮುಂದೆ ಇವರನ್ನು ಸುಲಭವಾಗಿ ಸಮದೂಗಿಸುತ್ತದೆ. ಹೌದು ಇವರ ಹೆಚ್ಚಿನ ಯಶಸ್ಸು ಸ್ತ್ರೀವೇಷಗಳಲ್ಲಿ ಅದೂ ಗರತಿ ಪಾತ್ರಗಳಲ್ಲಿ. ಆಟ ಮತ್ತು ಕೂಟಗಳೆರಡರಲ್ಲೂ ಇವರದ್ದು ಸಮತೂಕದ ಪಾತ್ರ ಚಿತ್ರಣ.


ಕಟೀಲು ಮೇಳ ಹಾಗೂ ನಿತ್ಯವೆಂಬ ಹಾಗೆ ಕಟೀಲು ರಥಬೀದಿ - ಪರಿಸರಗಳಲ್ಲಿ ನಡೆವ ಯಕ್ಷಗಾನಗಳನ್ನು
ವೀಕ್ಷಿಸಿ ಆ ಮೂಲಕ ಯಕ್ಷಗಾನದ ಮೇಲೆ ಇವರು ಆಕರ್ಷಿತರಾದವರು. ಪಾಂಚಜನ್ಯ ಪ್ರಸಂಗದಲ್ಲಿ ಸಾಂದೀಪನಿ, ಮಣಿಕಂಠ ಮಹಿಮೆಯಲ್ಲಿ ಸುಮುಖಿ, ಚಕ್ರೇಶ್ವರ ಪರೀಕ್ಷಿತದ ಗುರುವಾಯೂರಪ್ಪ, ಶ್ರೀ ದೇವಿ ಮಹಾತ್ಮೆಯಲ್ಲಿ ಆದಿಮಾಯೆ ದಿತಿದೇವಿ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಯಕ್ಷಗಾನ ತಾಳಮದ್ದಳೆ ಅರ್ಥಧಾರಿಯಾಗಿಯೂ ತನ್ನ ಪ್ರತಿಭೆಯನ್ನು ಮೆರೆದವರು. ಈಗ ೩೨ರ ವಸಂತಕ್ಕೆ ಕಾಲಿಟ್ಟಿರುವ ಸ್ವಾತಿ, ಸಂತೋಷ್ ರಾವ್ ಅವರ ಮಡದಿಯಾಗಿದ್ದು ಇವರ ಪುತ್ರ ಸಾತ್ವಿಕ ರಾವ್.

ಯಕ್ಷಗಾನ ತವರೂರು ಶ್ರೀ ಕ್ಷೇತ್ರ ಕಟೀಲಿನ ಪರಿಸರದಲ್ಲಿ ಹುಟ್ಟಿ ಬೆಳೆದು ಯಕ್ಷಗಾನದತ್ತ ಆಕರ್ಷಿತರಾದ ಸ್ವಾತಿ, ಶೇಖರ ಡಿ. ಶೆಟ್ಟಿಗಾರ್- ಗುರುಗಳು ತನ್ನ ಯಕ್ಷಗಾನದ ಆಸಕ್ತಿಗೆ ನೀರೆರೆದು ಪೋಷಿಸಿದ್ದಾರೆ. ಅವರ ಪ್ರೋತ್ಸಾಹ ಮತ್ತು ನನ್ನ ಮೇಲೆ ಭರವಸೆ ಇಟ್ಟು ಕೊಟ್ಟ ಪ್ರಮುಖ ಪಾತ್ರಗಳ ನಿರ್ವಹಣೆಯಿಂದಾಗಿ, "ದ್ಯಾಟ್‛ ಕುಟುಂಬ, ನನ್ನ ತವರು ಮತ್ತು ಗಂಡನ ಕುಟುಂಬದವರಿಂದಲೂ ಪ್ರಶಂಸೆ-ಹೆಗ್ಗಳಿಕೆಗಳನ್ನು ಪಡೆಯುವಲ್ಲಿ ಸಹಕಾರಿಯಾಯಿತು  ಎನ್ನುತ್ತಾರೆ. ಯಾವುದೇ ನಿರ್ಬಂಧವಿಲ್ಲದೆ ಎಲ್ಲಾ ವಯೋಮಾನದವರ ಕಲಿಕಾ ಕೇಂದ್ರವಾಗಿರುವ ಅಭ್ಯಾಸ ತರಗತಿಯಲ್ಲಿ ನಾನು ಕೂಡ ವಿದ್ಯಾರ್ಥಿಯೆಂದು ಹೇಳಿಕೊಳ್ಳುವಲ್ಲಿ ನನಗೆ ಹೆಮ್ಮೆಯಿದೆ ಎನ್ನುತ್ತಾರೆ. ಕಲೆಗಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟ ಉಭಯ ಗುರುಗಳ ಮಾರ್ಗದರ್ಶನ, ಯಾವನೇ ವಿದ್ಯಾರ್ಥಿಯಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ, ಹೊರಗೆಳೆದು, ನಿಕಷಕ್ಕೊಡ್ಡಿ ಪ್ರಕಾಶಕ್ಕೆ ತರುವ ಅವರ ಕೌಶಲ, ಭರವಸೆ- ಪ್ರೋತ್ಸಾಹಗಳ ಕಾರಣದಿಂದ ನಾನು ನಿರ್ವಹಿಸಿದ ಎಲ್ಲಾ ಪಾತ್ರಗಳಿಗೂ ಯಥಾಸಾಧ್ಯ ನ್ಯಾಯ ಒದಗಿಸಲು ನನ್ನ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ನನ್ನ ಪ್ರಥಮ ರಂಗಪ್ರವೇಶದ ಪಾಂಚಜನ್ಯ ಪ್ರಸಂಗದ ಸಾಂದೀಪನಿ ಮತ್ತು ಕೃಷ್ಣಾರ್ಜುನ ತಾಳಮದ್ದಲೆಯಲ್ಲಿ ನಾನು ನಿರ್ವಹಿಸಿದ ಪಾತ್ರ ಸುಭದ್ರೆ ಈ ಎರಡು ಪಾತ್ರಗಳು ನನಗೆ ಅತೀ ಮೆಚ್ಚು ಮತ್ತು ಅತೀ ಪ್ರಶಂಸೆಯನ್ನು ತಂದುಕೊಟ್ಟದ್ದು. ಇದಕ್ಕೆ ಕಾರಣ ಗುರುಗಳ ನಿರ್ದೇಶನ ಮತ್ತು ಮಾರ್ಗದರ್ಶನ. ನನ್ನ ಕುಟುಂಬವೇ ನನ್ನ ಬಗ್ಗೆ ಹೆಮ್ಮೆ ಪಡುವಂತೆ ನನ್ನನ್ನು ಬೆಳೆಸಿದ ‚ದ್ಯಾಟ್‛ ಕುಟುಂಬಕ್ಕೆ ಹೃದಯ ತುಂಬಿದ ಕೃತಜ್ಙತೆಗಳು ಹಾಗೂ ಇನ್ನಷ್ಟು ಯುವಜನತೆಯಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ, ಪುರಾಣ ಪುಣ್ಯ ಕಥೆಗಳ ಅರಿವು ಮೂಡಿಸುವ ಕೆ­ಲಸ 'ದ್ಯಾಟ್‛ ನಿಂದ ನಡೆಯಲಿ ಎಂದು ಮನದುಂಬಿ ಹಾರೈಸುತ್ತಾರೆ.



                               ಜೀವನ್ ಎಂ. ಕ್ರಾಸ್ತಾ 

ಜೀವನ್ ಎಂ. ಕ್ರಾಸ್ತರವರು 01.03.1993ರಲ್ಲಿ ಹೆನ್ರಿ ಕ್ರಾಸ್ತ ಮತ್ತು ಗ್ರೇಸಿ ಡಿಸೋಜ ದಂಪತಿಗಳ ಮಗನಾಗಿ ಜನಿಸಿದರು. ಬಿ.ಎ ಪದವಿಯನ್ನು ಪೂರ್ಣಗೊಳಿಸಿದ ಜೀವನ್ ಯಕ್ಷಗಾನದಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದಾರೆ. 13 ವರ್ಷಗಳ ಕಾಲ ಗುರುಗಳಾದ ಶ್ರೀಬಾಲಕೃಷ್ಣ ಉಡ್ಡಂಗಳರ ಗರಡಿಯಲ್ಲಿ ಶಿಷ್ಯನಾಗಿ ಪಳಗಿ ಯಕ್ಷಗಾನದ ನಾಟ್ಯ, ರಂಗಕ್ರಮಗಳು, ಪಾತ್ರಚಿತ್ರಣ ಮತ್ತು ಬಣ್ಣಗಾರಿಕೆಗಳನ್ನು ಅಭ್ಯಾಸ ಮಾಡಿದ್ದಾರೆ. 


ಯಕ್ಷಗಾನ ಪ್ರಪಂಚದಲ್ಲಿ ಕೇವಲ ಬೆರಳೆಣಿಕೆಯಲ್ಲಿ ಕಾಣಿಸಿಕೊಂಡ ಕ್ರೈಸ್ತ ಸಮಾಜ ಬಾಂಧವರಲ್ಲಿ ಇವರೂ ಕೂಡ ಒಬ್ಬರು ಮಾತ್ರವಲ್ಲ ಖ್ಯಾತನಾಮರ ಸಾಲಿನಲ್ಲಿ ಸೇರ್ಪಡೆಯಾಗುವ ಅರ್ಹತೆ ಹೊಂದಿದ್ದಾರೆ. ಅಗತ್ಯಕ್ಕೆ ಎಲ್ಲಾ 

ಪಾತ್ರಗಳಿಗೆ ಒಗ್ಗುವ ಸಾಮರ್ಥ್ಯವಿದ್ದರೂ ಹೆಚ್ಚಿನ ಸಿದ್ಧಿ ಮತ್ತು ವೈಯಕ್ತಿಕವಾಗಿ ಇಷ್ಟ ಪಡುವುದು ಬಣ್ಣದ ವೇಷ ಮತ್ತು ರಾಜವೇಷಗಳನ್ನು. ಈಗಾಗಲೇ ಅನೇಕ ಯಕ್ಷಗಾನ ಪ್ರಸಂಗದಲಿ ಪಾತ್ರಧಾರಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಜದಿಲೀಪ ಪ್ರಸಂಗದಲ್ಲಿ ‘ರಾಜದಿಲೀಪ’ನಾಗಿ, ಮುರಾಸುರ ವಧೆ ಪ್ರಸಂಗದಲ್ಲಿ ‘ಮುರಾಸುರ’ನಾಗಿ, ಭಾರ್ಗವ ವಿಜಯ ಪ್ರಸಂಗದಲ್ಲಿ ‘ಭಾರ್ಗವ’ನಾಗಿ, ಮಹಿ಼ಷಾಸುರ ಮರ್ಧಿನಿ ಪ್ರಸಂಗದಲ್ಲಿ ‘ಮಹಿಷಾಸುರ’ನಾಗಿ, ಶಾಂಭವಿ ವಿಲಾಸದಲ್ಲಿ ನಿಶುಂಭ, ರಕ್ತಬೀಜ, ಕಾಲಿ,ವಿದ್ಯುನ್ಮಾಲಿಯಾಗಿಯೂ ಅಭಿನಯಿಸಿದ್ದಾರೆ. ಕಳೆದ ಸಾಲಿನ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ ಪ್ರಯೋಜಿತ ಪಟ್ಲ ಸಂಭ್ರಮದಲ್ಲಿ ಭಾಗವಹಿಸಿ, ಮಹಿಷಮರ್ದಿನಿ-ಜಗಜ್ಜನನಿ ಪ್ರಸಂಗದ ವಿದ್ಯುನ್ಮಾಲಿ ಮತ್ತು ಧೂಮ್ರಾಕ್ಷ ಪಾತ್ರದಲ್ಲಿ ದುಬಾಯಿಯ ಯಕ್ಷರಸಿಕರನ್ನು ರಂಜಿಸಿದ್ದಾರೆ. ಇವರಿಂದ ಇನ್ನಷ್ಟು ದಾಖಲಾರ್ಹ ಸಾಧನೆಗಳು ಮೂಡಿಬರಲೆಂದು ಹಾರೈಕೆ.


                                      ಕೃಪಾಶ್ರೀ ಸಿ.ಸುವರ್ಣ

ಕೃಪಾಶ್ರೀ ಸಿ. ಸುವರ್ಣರವರು ಚಂದ್ರಹಾಸ್ ಮತ್ತು ಸುಜಾತರವರ ಮಗಳಾಗಿ 09.03.1998ರಲ್ಲಿ ಜನಿಸಿದರು. ಬಿ.ಕಾಂ ಪದವೀಧರರಾದ ಇವರು ದೂರಶಿಕ್ಷಣದ ಮೂಲಕ ಎಂ.ಕಾA. ಪದವಿಯನ್ನು ಮುಂದುವರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಯಕ್ಷಗಾನದಲ್ಲಿ ಆಸಕ್ತಿ ಹೊಂದಿರುವ ಕೃಪಾಶ್ರೀ ದುಬೈಯ ಯಕ್ಷಗಾನ ಅಭ್ಯಾಸ ತರಗತಿಗೆ ಸೇರ್ಪಡೆಗೊಂಡು ಶೇಖರ್ ಡಿ. ಶೆಟ್ಟಿಗಾರ್‌ರ ಮಾರ್ಗದರ್ಶನದಲ್ಲಿ ನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ. 


ಯಕ್ಷಗಾನ ಮಾತ್ರವಲ್ಲದೆ ಭರತನಾಟ್ಯದಲ್ಲೂ ಆಸಕ್ತಿ ಹೊಂದಿರುವ ಈಕೆ, ಗುರುಗಳಾದ 
ವಿಧ್ವಾನ್ ಚಂದ್ರಶೇಖರ್ ನಾವಡರಲ್ಲಿ ಭರತನಾಟ್ಯವನ್ನು ಅಭ್ಯಾಸ ಮಾಡಿದ್ದಾರೆ. ಈಗಾಗಲೇ ವಿವಿದೆಡೆ ಪ್ರದರ್ಶನಗೊಂಡ ಯಕ್ಷಗಾನದ ವಿವಿಧ ಪ್ರಸಂಗದಲ್ಲಿ ಭಾಗವಹಿಸಿದ ಇವರು ತರಣೀಸೇನ ಕಾಳಗದಲ್ಲಿ ‘ಸರಮೆ’ಯಾಗಿಯೂ, ಮೋಹಿನಿ ಏಕಾದಶಿಯಲ್ಲಿ ‘ಸಂಧ್ಯಾವಳಿ’ಯಾಗಿಯೂ, ಮಹಿಷಮರ್ಧಿನಿ ಜಗಜ್ಜನನಿ ಪ್ರಸಂಗದಲ್ಲಿ ‘ವಿಷ್ಣು’ವಾಗಿಯೂ ಭಾಗವಹಿಸಿದ್ದಾರೆ. ಯಕ್ಷಗಾನದಲ್ಲಿ ಇನ್ನಷ್ಟು ಸಾಧನೆ ಮಾಡಿ ಉತ್ತಮ ಕಲಾವಿದೆಯಾಗಬೇಕೆಂಬ ಹಂಬಲ ಇವರದ್ದು.


                               ಕೃಷ್ಣ ಪ್ರಸಾದ್ 

1985 ಅಕ್ಟೋಬರ್ 13 ರಂದು ಎಸ್. ಜನಾರ್ಧನ ರಾವ್- ಶ್ಯಾಮಲಾರಾವ್ ದಂಪತಿಗಳಿಗೆ ಮಗನಾಗಿ ಜನಿಸಿದರು. ಇಂಟೀರಿಯಲ್ ಡಿಸೈನರ್ ಕೋರ್ಸ್ ಪೂರ್ತಿಗೊಳಿಸಿದ ಕೃಷ್ಣಪ್ರಸಾದ, ತಂದೆ ಜನಾರ್ಧನ ರಾವ್ ಸುರತ್ಕಲ್ ಮಹಾ ಗಣಪತಿ ಯಕ್ಷಗಾನ ಮೇಳದಲ್ಲಿ ಕಲಾವಿದರಾಗಿದ್ದರು. ಇದುವೇ ಕೃಷ್ಣ ಪ್ರಸಾದ ಕೂಡಾ ಯಕ್ಷಗಾನದತ್ತ ಆಕರ್ಷಿತರಾಗಲು ಪ್ರಚೋದನೆಯಾಯಿತೆಂದರೂ ತಪ್ಪಾಗಲಾರದು. 2000 -2001ನೇ ಸಾಲಿನಲ್ಲಿ ಗಣೇಶಪುರ ಗಿರೀಶ್ ನಾವಡ, ದೀಪಕ್ ರಾವ್ ಪೇಜಾವರ, ಅವರಿಂದ ಹೆಜ್ಜೆಗಾರಿಕೆಯನ್ನು ಕಲಿತು, 2000ನೇ ಇಸವಿಯಲ್ಲಿ ಯಕ್ಷ ಗುರು ಸಾರ್ವಭೌಮ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಂದ ಮದ್ದಳೆ ಅಭ್ಯಾಸ ಮಾಡಿಕೊಂಡಿದ್ದಾರೆ. ಮುಂದೆ 2012ರಿಂದ ಉದ್ಯೋಗ ನಿಮಿತ್ತ ದುಬಾಯಿಗೆ ಬಂದಾಗ ಶೇಖರ ಡಿ. ಶೆಟ್ಟಿಗಾರರಿಂದ ಭಾಗವತಿಕೆಯ ಅಭ್ಯಾಸವನ್ನು ಮುಂದುವರಿಸಿದರು. 


ಉತ್ತಮ ವೇ಼ಷಧಾರಿ, ಭಾಗವತಿಗೆ, ಚೆಂಡೆ- ಮದ್ದಳೆ ವಾದಕರಾಗಿ ದುಬಾಯಿ ಯಕ್ಷಗಾನ ತಂಡಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಪುರಾಣ ಪ್ರಸಂಗಗಳಲ್ಲಿ ಸಾಧಾರಣ ಎಲ್ಲಾ ಬಗೆಯ ಪಾತ್ರಗಳನ್ನು ಮಾಡಿದ 
ಅನುಭವಿ ಕಲಾವಿದ. ಯಕ್ಷಗಾನ ತಾಳಮದ್ದಳೆಯ ಭಾಗವತರಾಗಿ, ಅರ್ಥಧಾರಿಯಾಗಿ ಮಿಂಚಿದ್ದಾರೆ. ಉತ್ತಮ ಸ್ವರ ಭಾರ ಇರುವ ಶ್ರೀಯುತರು ಯಕ್ಷಗಾನೇತರ ಕಾರ್ಯಕ್ರಮದಲ್ಲೂ ಹಾಡಿ ಉತ್ತಮ ಗಾಯಕನಾಗಿ ಗುರುತಿಸಿಕೊಂಡಿದ್ದಾರೆ. 2005 ರಲ್ಲಿ ನಡೆದ ಎಸ್ ಡಿ ಎಂ ಯಕ್ಷೋತ್ಸವದಲ್ಲಿ ದ್ವಿತೀಯ ಉತ್ತಮ ರಾಜವೇಷ ಪ್ರಶಸ್ತಿ ಹಾಗೂ ಶಾರ್ಜಾ ಕರ್ನಾಟಕ ಸಂಘ ಹಮ್ಮಿಕೊಂಡ ಮಯೂರ ಗಾನ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಎರಡು ಬಾರಿ ದ್ವಿತೀಯ ಪ್ರಶಸ್ತಿ ಗಳಿಸಿಕೊಂಡಿದ್ದಾರೆ. ಭರತನಾಟ್ಯ ಕಲಾವಿದೆಯಾದ ಪತ್ನಿ ರಂಜನಿರಾವ್ ಅವರ ಪ್ರೋತ್ಸಾಹ ಕೂಡಾ ಕೃಷ್ಣ ಪ್ರಸಾದರಿಗೆ ಸಿಕ್ಕಿರುವುದು ಯಕ್ಷಗಾನದಲ್ಲಿ ಉತ್ತಮ ಸಾಧನೆಗೈಯುವಲ್ಲಿ ಸುಗಮವಾಯಿತು. ದುಬಾಯಿ ಅಭ್ಯಾಸ ತರಗತಿಯ ಜೊತೆ ನನ್ನ ಪಯಣ ತುಂಬಾ ಅದ್ಭುತವೆಂದೇ ಇವರ ಬಣ್ಣನೆ. ತರಗತಿಯ ಆರಂಭ ಕಾಲದಿಂದಲೂ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವ ಇವರು ಬಹು ಕಾಲದ ಪಯಣದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಣ್ಣದವೇಷ ಮತ್ತು ರಾಜವೇಷಗಳಲ್ಲಿ ಹೆಚ್ಚಿನ ಸಿದ್ಧಿ ಇದೆ. ಅಗತ್ಯಕ್ಕೆ ಸ್ತ್ರೀವೇಷಧಾರಿಯಾಗಿಯೂ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸಂಗ ಅಭ್ಯಾಸದ ಅಗತ್ಯಕ್ಕಾಗಿ ಅನಿವರ‍್ಯಾವಾಗಿ ಭಾಗವತಿಕೆ ಅಭ್ಯಾಸಕ್ಕೆ ಮನಸ್ಸು ಮಾಡಿದ ನಾನು ಪ್ರದರ್ಶನ ದಿನ ವೇದಿಕೆ ಏರುವ ಅವಕಾಶವನ್ನೂ ಪಡೆದು ಕೊಂಡೆ ಎಂದು ಹೆಮ್ಮೆ ಯಿಂದ ಹೇಳಿಕೊಳ್ಳುತ್ತಾರೆ.ಇವರ ಕಲಾಜೀವನ ಇನ್ನಷ್ಟು ಪ್ರಜ್ವಲಿಸಲಿ ಎಂಬುದೆ ನಮ್ಮ ಹಾರೈಕೆ.


                            ಸುಶಾಂತ ರಾಮ ಜೆಪ್ಪು 

ಸುಶಾಂತರಾಮ ಜೆಪ್ಪು ರವರಿಗೆ ಯಕ್ಷಗಾನ ಕಲೆ ಮನೆಯಿಂದಲೇ ಅಂಟಿಕೊಂಡದ್ದು. ಇವರ ತಂದೆ ಜೆಪ್ಪು ಯೋಗೀಶ್ ರಾವ್ ಹವ್ಯಾಸಿ ಭಾಗವತರಾಗಿ ಪರಶ್ರಮ ಉಳ್ಳವರು. ಸಂಗೀತ- ಹಾರ್ಮೋನಿಯಂ ಕಲಿತು ಪ್ರಯೋಗಕ್ಕೆ ತೊಡಗಿಸಿದವರು. ಹಾಗೆ ಮನೆಯಿಂದಲೇ ಬಾಲ್ಯದಿಂದಲೇ ಸಂಗೀತ- ಯಕ್ಷಗಾನ ಸಂಸ್ಕಾರ ಧೀಕ್ಷೆ ಸಿಕ್ಕಿತು. ಶಾಲಾ ಕಾಲೇಜು ದಿನಗಳಿಂದಲೇ ಯಕ್ಷಗಾನ ವೇಷಧಾರಿಯಾಗಿ ರಂಗವೇರಿದವರು. ಸ್ವಲ್ಲಮಟ್ಟಿನ ಹಿಮ್ಮೇಳ ಅಭ್ಯಾಸ ಮತ್ತು ಸಂಗೀತ ಅಭ್ಯಾಸವೂ ಶ್ರೀಯುತರಿಗಿದೆ. ಉದ್ಯೋಗ ನಿಮಿತ್ತ ದುಬಾಯಿಗೆ ಆಗಮಿಸಿದ ಸುಶಾಂತರಾಮರು, ಬಾಲ್ಯದ ಕಲಾ ನಂಟು ಕಳೆದುಕೊಂಡವರಲ್ಲ. 


ತರಣಿಸೇನ ಕಾಳಗದ ಭಾವನಾತ್ಮಕ ವಿಭೀಷಣ, ಚಕ್ರೇಶ್ವರ ಪರೀಕ್ಷಿತದ ಬಲರಾಮ 
ಮುಂತಾದ ಪೋಷಕ ಪಾತ್ರಗಳ ಮೂಲಕ ದುಬಾಯಿ ಯಕ್ಷರಂಗವೇರಿದ್ದಾರೆ. ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ ಪ್ರಾರಂಭ ಕಾಲಕ್ಕೆ ಒತ್ತಾಸೆಯಾಗಿ ನಿಂತವರು. ಪ್ರೋತ್ಸಾಹಿಸಿದವರು. ಕೇವಲ ರಂಗದಲ್ಲಿ 

ಕಾಣಿಸಿಕೊಳ್ಳುವ ಇಚ್ಛೆ ಮಾತ್ರ ಹೊಂದಿದವರಲ್ಲ. ನಾಟ್ಯ, ಹಿಮ್ಮೇಳ, ವೇಷಭೂಷಣ ಮತ್ತು ಮೇಕಪ್ ಕಲಿಕೆಗಳಲ್ಲಿ ಆಸಕ್ತಿ ಹೊಂದಿದವರು. ಇನ್ನಷ್ಟು ಅವಕಾಶಗಳನ್ನು ಉಪಯೋಗಿಸಿಕೊಂಡು ಪರಿಪೂರ್ಣತೆಯತ್ತ ಪಯಣಿಸಬೇಕೆಂಬ ಅಪೇಕ್ಷೆ ಶ್ರೀಯುತರದ್ದು.(ಮುಂದುವರಿಯುವುದು...)

         ಲೇಖನ: ವಾಸು ಬಾಯಾರ್- ಕಾಸರಗೋಡು


ಖ್ಯಾತ ಯಕ್ಷಗಾನ ಕಲಾವಿದ,ರಂಗನಟರು


ದುಬಾಯಿ ಯಕ್ಷಗಾನ ಅಭ್ಯಾಸ ತರಬೇತಿ DYAT ಬಗ್ಗೆ ಕಳೆದ ಸರಣಿ ಲೇಖನಗಳು ಈ ಕೆಳಗೆ ನೀಡಲಾಗಿದೆ. ಲಿಂಕ್ ಒತ್ತಿ ಓದಿ ನೋಡಿ.

ವಿದೇಶ_ವಿಶೇಷ_25 ಸಂಚಿಕೆ

 ಕರಾವಳಿಯ ಯಕ್ಷಗಾನಕ್ಕೆ ದುಬಾಯಿಯಲ್ಲಿದೆ ಸಮಗ್ರ ಅಧ್ಯಯನದ ವಿಶೇಷ ಕಲಾ ವಿದ್ಯಾಲಯ👇

https://visheshachannel.blogspot.com/2021/05/dyat.html

https://visheshachannel.blogspot.com/2021/05/dyat.html

ವಿದೇಶ_ವಿಶೇಷ ಅಂಕಣ-26

ದುಬಾಯಿಯ DYAT ಕಲಾ ಪಯಣದ ಭಾಗ 2👇

https://visheshachannel.blogspot.com/2021/05/dyat_20.html

https://visheshachannel.blogspot.com/2021/05/dyat_20.html



Post a Comment

0 Comments