ದುಬೈಯ ದ್ಯಾಟ್ ನ ರೂವಾರಿ, ಯಕ್ಷ ಸಂಘಟನಾ ಸಾರಥಿ|ಕೊಟ್ಟಿಂಜ ದಿನೇಶ ಟಿ. ಶೆಟ್ಟಿ


ವಿದೇಶ_ವಿಶೇಷ   ಅಂಕಣ 31


(ವಾಚಕರ ಗಮನಕ್ಕೆ.....ದುಬೈಯಲ್ಲಿ ಯಕ್ಷಗಾನ ಅಭ್ಯಾಸ ತರಬೇತು DYAT ಬಗ್ಗೆ ಸರಣಿ ಬರಹದ ಮೂಲಕ ಪರಿಚಯಿಸುತ್ತಿದ್ದ ಅಂಕಣ ಬರಹದ ಮುಂದುವರಿದ ಕಂತು ಇದಾಗಿದೆ. ಮುಂದೆ ಓದಿ. ಒಟ್ಟು ಬರಹದ ಹಿಂದಿನ ನಾಲ್ಕು ಲಿಂಕ್ ಗಳು ಈ ಲೇಖನದ ಕೊನೆಯಲ್ಲಿ ಕೊಡಲಾಗಿದೆ.)


ದುಬಾಯಿ: ದೂರ ದೃಷ್ಟಿ, ಕಲಾ ಪ್ರೇಮ, ದೈವ ನಂಬಿಕೆ, ಸರ್ವರಲ್ಲಿ ಸಮರಸದ ಬಾಳ್ವೆ, ಸಜ್ಜನರ ಒಡನಾಟ, ಅಶಕ್ತರಿಗೆ ನೆರವಿನ ಹಸ್ತ ಚಾಚುವ ಉದಾರತೆ, ಸೇವೆಯಿಂದಲೆ ಸಂತೃಪ್ತಿ ಪಡೆವ ನಿಷ್ಪೃಹತೆ ಇವೆಲ್ಲದರ ಒಟ್ಟು ರೂಪ  ಕೊಟ್ಟಿಂಜ ದಿನೇಶ ಟಿ. ಶೆಟ್ಟಿ ಎಂದರೆ ತಪ್ಪಾಗಲಾರದು. ಅವರ ಕರ್ತೃತ್ವ ಶಕ್ತಿಯ ದ್ಯೋತಕವಾಗಿಯೇ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ ಬೆಳೆದು ನಿಲ್ಲುವುದಕ್ಕೆ ಸಾಧ್ಯವಾಯಿತು. 

ದುಬಾಯಿಯ ಮರಳುಗಾಡು ಸಾಂಸ್ಕೃತಿಕ ನಗರವಾಗಿ ಬೆಳೆದು ನಿಲ್ಲುವಲ್ಲಿ ಅನೇಕರ ಕೊಡುಗೆ ಇದೆ, ಕನಸಿದೆ, ದೇಣಿಗೆಯಿದೆ, ಧ್ಯೇಯವಿದೆ. ಅನೇಕ ಇತರ ಜನಪದ, ಶಾಸ್ತ್ರೀಯ ನೃತ್ಯ ಪ್ರಕಾರಗಳ ಪ್ರದರ್ಶನ ಪರಿಶ್ರಮಗಳ ಜೊತೆ ದುಬಾಯಿ ಸಾಂಸ್ಕೃತಿಕವಾಗಿ ಬೆಳವೆಣಿಗೆ ಹೊಂದುವಲ್ಲಿ ಯಕ್ಷಗಾನದ ಕೊಡುಗೆಯೂ ದೊಡ್ಡದು. ಸುಮಾರು ಮೂರು-ನಾಲ್ಕು ದಶಕಗಳ ಹಿಂದೆಯೇ ಇಲ್ಲಿಗೆ ಶ್ರೀಯುತ ಬಲಿಪ ನಾರಾಯಣ ಭಾಗವತರ ನೇತೃತ್ವದ ತಂಡ ಪಿ. ವೆಂಕಟ್ರಾಯ ಐತಾಳರ ಸಂಚಾಲಕತ್ವದಲ್ಲಿ ಇಲ್ಲಿ ಪ್ರದರ್ಶನ ನೀಡಿದ ಮೌಕಿಕ ದಾಖಲೆಗಳಿವೆ. ಡಾ.ಶಿವರಾಮ ಕಾರಂತರ ನಿರ್ದೇಶನದ ಬಡಗುತಿಟ್ಟು ಯಕ್ಷಗಾನ ತಂಡವೂ ಇಲ್ಲಿ ಪ್ರದರ್ಶನ ನೀಡಿತ್ತು.

ಇಲ್ಲಿ ಉದ್ಯೋಗ ನಿಮಿತ್ತ ನೆಲೆ ನಿಂತ ಕರಾವಳಿಗರಲ್ಲಿ ಹುದುಗಿದ್ದ ಪ್ರತಿಭೆಗೆ ಕನ್ನಡಿ ಹಿಡಿದು , ಒಗ್ಗೂಡಿಸಿ, ವೇದಿಕೆ ಒದಗಿಸಿ ಯಕ್ಷಗಾನ ಕಾರ್ಯಕ್ರಮ ಸಂಘಟಿಸಿದ ಹಿರಿಮೆ ಕೀರ್ತಿಶೇಷ ಉಮೇಶ್ ನಂತೂರರಿಗೆ ಸಲ್ಲುತ್ತದೆ. ಶ್ರೀಯುತರು ಯಕ್ಷಗಾನ ಮಾತ್ರವಲ್ಲದೆ ನಾಟಕ- ಕರಾವಳಿಗರ ವೈವಿಧ್ಯಮಯಕಾರ್ಯಕ್ರಮಗಳಿಗೆಲ್ಲ ವೇಷಭೂಷಣ, ಮೇಕಪ್ ವ್ಯವಸ್ಥೆಗಳ ನೇತೃತ್ವವನ್ನೂ ವಹಿಸಿದ್ದರು. ಸ್ವತಹ ಕಲಾವಿದರೂ , ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದ ಸ್ವಂತ ಹಣವನ್ನು ವೆಚ್ಚ ಮಾಡಿ, ಪರಿಶ್ರಮ ಪಟ್ಟು ದುಬಾಯಿಯಲ್ಲಿ ಯಕ್ಷಗಾನ ಚಟುವಟಿಕೆಗೆ ಬೀಜ ಬಿತ್ತಿ ಇಂದು ಅದು ಹೆಮ್ಮರವಾಗುವುದಕ್ಕೆ ಮೂಲ ಕಾರಣಕರ್ತರೇ ದಿವಂಗತ ಉಮೇಶ ನಂತೂರು ಅವರು. ಆ ನಂತರ ದುಬಾಯಿಯಲ್ಲಿ ಯಕ್ಷಗಾನ ಬೆಳವಣಿಗೆಗೆ ದುಡಿದವರು ಹತ್ತ ಹಲವು ಮಂದಿ. ಕಲಾವಿದರಾಗಿದ್ದು ಸಂಘಟನೆಯಲ್ಲಿಯೂ ತೊಡಗಿಸಿಕೊಂಡು ದುಬಾಯಿ ಯಕ್ಷಗಾನದ ಔನ್ನತ್ಯಕ್ಕೆ ದುಡಿದವರಲ್ಲಿ ಪ್ರಮುಖರು ಕಿಶೋರ್ ಗಟ್ಟಿ, ರವೀಂದ್ರ ಉಚ್ಚಿಲ್, ಪದ್ಮರಾಜ ಎಕ್ಕಾರು, ಭವಾನಿಶಂಕರ ಶರ್ಮ, ವಿಠಲ ಶೆಟ್ಟಿ, ವೆಂಕಟೇಶ ಶಾಸ್ತ್ರೀ ಪುತ್ತಿಗೆ, ಚಿದಾನಂದ ಪೂಜಾರಿ ವಾಮಂಜೂರು, ಹರೀಶ್ ಶೆಟ್ಟಿಗಾರ್ ಯೆಯ್ಯಾಡಿ, ಗಿರಿಧರ ನಾಯಕ್, ಪ್ರಭಾಕರ ಸುವರ್ಣ, ಸುಧಾಕರ ತುಂಬೆ ಮೊದಲಾದವರು. ದುಬಾಯಿ ಕಲಾವಿದರಿಂದಲೇ ಸಂಘಟಿಸಲ್ಪಟ್ಟ ಪ್ರಥಮ ಯಕ್ಷಗಾನ ಉಮೇಶ್ ನಂತೂರು ಸಂಯೋಜನೆಯಲ್ಲಿ ಶ್ರೀಯುತ ಪುತ್ತಿಗೆ ವಾಸುದೇವ ಭಟ್ರ ಸ್ವಗೃಹದಲ್ಲಿ ನಡೆದ ಮಹಿಷವಧೆ ಎಂಬುದು ಗಮನಾರ್ಹ ಸಂಗತಿ.

 ಇಲ್ಲಿ ಪಾತ್ರ ನಿರ್ವಹಿಸಿದ ಪ್ರಮುಖರಲ್ಲಿ ಮಹಿಷಾಸುರನಾಗಿ ಗಿರಿಧರ್ ನಾಯಕ್ ಮತ್ತು ಶ್ರೀದೇವಿಯಾಗಿ ಶ್ರೀಮತಿ ದಿವ್ಯ ಭವಾನಿ ಶಂಕರ ಶರ್ಮರು. 


ಆಗಾಗ್ಗೆ ಯಕ್ಷಗಾನ ಕಾರ್ಯಕ್ರಮ ಸಂಘಟನೆ ಮಾಡಿದ ಪ್ರಮುಖರಲ್ಲಿ ಶ್ರೀ ಸರ್ವೋತ್ತಮ ಶೆಟ್ಟಿ ಮತ್ತು ಪ್ರವೀಣ ಶೆಟ್ಟಿ ವಕ್ವಾಡಿ, ದಯಾನಂದ ಹೆಬ್ಬಾರ್, ತೀರಾ ಇತ್ತೀಚೆಗೆ ಪದ್ಮಶಾಲಿ ಸಮುದಾಯ 
ದಶಮಾನೋತ್ಸವ ಸಲುವಾಗಿ ಊರಿನ ಪ್ರಮುಖ ಕಲಾವಿದರ ಜೊತೆ ತಾಳಮದ್ದಳೆ ಸಂಯೋಜಿಸಿದ ರವಿ ಶೆಟ್ಟಿಗಾರ್ ಕಾರ್ಕಳ ಮೊದಲಾದವರು ಗುರುತಿಸಲ್ಪಟ್ಟಿದ್ದಾರೆ.ಆದರೆ ಇವರೆಲ್ಲರಿಗಿಂತ ವಿಭಿನ್ನವಾಗಿ, ದುಬಾಯಿ ಯಕ್ಷರಂಗದ ಇತಿಹಾಸದಲ್ಲಿ ಗುರುತಿಸಲ್ಪಡುವ ಪ್ರಮುಖ ಹೆಸರೇ ಶ್ರೀಯುತ ದಿನೇಶ ಶೆಟ್ಟಿ ಕೊಟ್ಟಿಂಜ.  


ಶ್ರೀಯುತ ದಿನೇಶ ಶೆಟ್ಟಿಯವರಿಗೆ ಯಕ್ಷಗಾನವೆಂದರೆ ಅತೀವ ಪ್ರೀತಿ. 
ಯಕ್ಷಗಾನ ಸೇವೆಗೆ ಒಲಿದು ವರದಹಸ್ತಳಾಗುವ, ಯಕ್ಷಗಾನ ಮಾತೆ ಶ್ರೀದೇವಿ ಭ್ರಮರಾಂಬಿಕೆಯಲ್ಲಿ ಅಚಲ ಶ್ರದ್ಧೆ - ಭಕ್ತಿ. ವಾಸುದೇವ ಭಟ್ಟರ ಮನೆಯಿಂದ ಪ್ರಾರಂಭವಾದ ಮಹಿಷವಧೆಯ ಕಾಲ - ಸರಿ ಸುಮಾರು 2000ನೇ ಇಸವಿಯಿಂದಲೇ ಯಕ್ಷಗಾನ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು. ಯಕ್ಷಗಾನ ಕುರಿತಾದ ಸಕಲ ಕಾರ್ಯವೂ ಅವರ ಪಾಲಿಗೆ ಕಟೀಲು ಶ್ರೀದೇವಿಯ ಸೇವೆ. ಇತ್ತೀಚಿನ ಎರಡು ದಶಕಗಳ ಕಾಲದಲ್ಲಂತೂ ದುಬಾಯಿ ಯಕ್ಷಗಾನ ಚಟುವಟಿಕೆಗಳನ್ನು ಉತ್ಕರ್ಷಕ್ಕೊಯ್ದ ಕೀರ್ತಿ ಶ್ರೀಯುತ ಶೆಟ್ಟರದ್ದು. 


1971ನೇ ಇಸವಿ ಜುಲೈ 01 ರಂದು ಕೊಟ್ಟಿಂಜ ತಿಮ್ಮಪ್ಪ ಶೆಟ್ಟಿ ಮತ್ತು ಸೀತ ಶೆಟ್ಟಿ ಮಗನಾಗಿ ಹುಟ್ಟಿದ ದಿನೇಶ ಶೆಟ್ಟಿಯವರು ತಮ್ಮ ಬಿ.ಕಾಂ.ವ್ಯಾಸಂಗ ಪೂರೈಸಿ 2000ನೆ ಇಸವಿಯಲ್ಲಿ ಉದ್ಯೋಗ ನಿಮಿತ್ತ ದುಬಾಯಿಗೆ ಬಂದರು. 
ಹಂತ ಹಂತವಾಗಿ ಬೆಳವಣಿಗೆ ಸಾಧಿಸಿದ ಶೆಟ್ಟರು ಈಗ ತನ್ನದೇ ಪಾಲುದಾರಿಕೆಯ ಡುಮೆಕ್ ಎಂಬ ಇಂಜಿನಿಯರಿಂಗ್ ಸಂಸ್ಥೆ ಸ್ಥಾಪಿಸಿ ವೈಯಕ್ತಿಕ ಬೆಳವಣಿಗೆಯ ಜೊತೆ ಅನೇಕರಿಗೆ ಉದ್ಯೋಗದಾತರೂ ಆಗಿದ್ದಾರೆ. 

2008 ರಿಂದ 2010ರ ತನಕ ದುಬಾಯಿಯಲ್ಲಿ ಯಕ್ಷಗಾನ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿತ್ತು. ಆ ಕಾಲದಲ್ಲಿ ತಾನೇ ಮುತುವರ್ಜಿ ವಹಿಸಿ, ಪೂರ್ಣ ಪ್ರಮಾಣದಲ್ಲಿ ಸಂಘಟಣೆಯಲ್ಲಿ ತೊಡಗಿಸಿಕೊಂಡು 2011ರಲ್ಲಿ ದುಬಾಯಿಯಲ್ಲಿ ಮತ್ತೆ ಯಕ್ಷ ದುಂದುಭಿ ಮೊಳಗುವಂತೆ ಮಾಡುವಲ್ಲಿ ಇವರ ಪಾತ್ರ ಹಿರಿದಾದುದು. 

ಎಲೆಮರೆ ಕಾಯಿಯಂತೆ ದುಡಿದವರು. ಅಷ್ಟರವರೆಗೆ ಯಕ್ಷಮಿತ್ರ ಸಂಸ್ಥೆಯ ಚಿದಾನಂದ ಪೂಜಾರಿಯವರ ಹೆಗಲಿಗೆ ಕೊಟ್ಟು ದುಡಿಯುತ್ತಿದ್ದ ಶೆಟ್ಟರು 2011ರಿಂದ ದುಬಾಯಿ ಯಕ್ಷಗಾನದ ಎಲ್ಲ ಕೆಲಸ ಕಾರ್ಯಗಳನ್ನು ತಾನು ಸಂಪೂರ್ಣ ತಲೆಯಲ್ಲಿ ಹೊತ್ತು ನಿರ್ವಹಿಸಿದರು. 2012ರಲ್ಲಿ ಯಕ್ಷಗಾನವನ್ನು ದುಬಾಯಿಯ ಪ್ರಮುಖ ರಂಗಮಂದಿರ ಶೇಖ್ ರಶೀದ್ ಅಡಿಟೋರಿಯಂನ ವೇದಿಕೆ ಯೇರಿಸಿದ ಕೀರ್ತಿಯೂ ಶ್ರೀಯುತರಿಗೆ ಸಲ್ಲುತ್ತದೆ.


ಸ್ವತಃ ತನ್ನ ಒಬ್ಬಳು ಮಗಳು, ಮತ್ತೊಬ್ಬ ಮಗನನ್ನೂ ಯಕ್ಷಗಾನ ಕಲಾವಿದರಾಗಿ ಬೆಳೆಸಿದ ಶ್ರೀಯುತರು ಇಂತಹ ಅವಕಾಶ ದುಬಾಯಿಯ ಉಳಿದ ಯಕ್ಷಗಾನಾಸಕ್ತ ಮಕ್ಕಳಿಗೂ ಲಭಿಸಬೇಕೆಂದು, 2015 - 2016 ನೇ ಸಾಲಿನಲ್ಲಿ " ಯಕ್ಷಗಾನ ಅಭ್ಯಾಸ ತರಗತಿ" ಯ ಉದಯಕ್ಕೆ ಕಾರಣರಾದರು , ಬೆಳೆಸಿದರು ಮುನ್ನಡೆಸಿದರು. ಇವರ ನಿವಾಸದಲ್ಲಿಯೇ 
ಬಹಳಷ್ಟು ಕಾಲ ಅಭ್ಯಾಸ ತರಗತಿಯ ಬಗೆಬಗೆಯ ತರಗತಿಗಳು ಸಂಪನ್ನಗೊಳ್ಳುತ್ತಿದ್ದವು. ಆ ಬಳಿಕ ಮಕ್ಕಳ ಸಂಖ್ಯೆ ಹೆಚ್ಚಾದಂತೆ ಸುಸಜ್ಜಿತ ವ್ಯವಸ್ಥೆಗಳಿಗಾಗಿ ಬೇರೆಡೆಗೆ ಸ್ಥಳಾಂತರ ಮಾಡಲಾಯಿತು. 2016ರಲ್ಲಿ ವರಮಹಾಲಕ್ಷ್ಮಿ ಪೂಜಾ ವೇದಿಕೆಯಲ್ಲಿ ಮಕ್ಕಳು ಮತ್ತು ಮಹಿಳೆಯರಿಂದ ಪ್ರದರ್ಶನ ಗೊಂಡ " ಪಾಂಚಜನ್ಯ" ಪ್ರಸಂಗ ಶೆಟ್ಟರ ಸಂಘಟನಾ ಚಾತುರ್ಯಕ್ಕೆ ಕೈಗನ್ನಡಿಯಾಯ್ತು.

2017 ರಲ್ಲಿ ತಂಡದ ಗುರುಗಳೂ ನಿರ್ದೇಶಕರಾದ ಶೇಖರ್ ಡಿ.ಶೆಟ್ಟಿಗಾರರಿಗೆ ಅಬುದಾಭಿ ಕರ್ನಾಟಕ ಸಂಘದವರು " ಡಾ. ದ.ರಾ.ಬೇಂದ್ರೆ ಪ್ರಶಸ್ತಿ " ಕೊಟ್ಟು ಗೌರವಿಸಿದ ಅದೇ ಸುಸಂದರ್ಭದಲ್ಲಿ ಮಕ್ಕಳ ತಂಡದ ಪೂರ್ವ ರಂಗ ಸಹಿತ ಶರಸೇತು ಬಂಧನ ಪ್ರದರ್ಶನ ಗೊಂಡಿತು. ಬಹು ಜನರ ಅಪೇಕ್ಚೆಯಂತೆ ಅದರ ಮರು ಪ್ರದರ್ಶನ ಶಾರ್ಜ ಕನ್ನಡ ಸಂಘದಲ್ಲಿಯೂ ಶ್ರೀಯುತರ ಮುಂದಾಳತ್ವ ದಲ್ಲಿ ಸಂಘಟಿಸಲ್ಪಟ್ಟಿತು. ಹುಟ್ಟೂರಿನಲ್ಲಿ ತನ್ನಿಬ್ಬರು ಮಕ್ಕಳು ಅದಿತಿ ಮತ್ತು ಆದಿತ್ಯ ರಿಂದಲೆ ಕೃಷ್ಣ-ಕೃಷ್ಣ -ಶ್ರೀಕೃಷ್ಣ ಎಂಬ ಕೃಷ್ಣಜನ್ಮದಿಂದ ತೊಡಗಿ ಕಂಸವಧೆಯ ತನಕ ಯಕ್ಷರೂಪಕವಾಗಿ ಪ್ರದರ್ಶಿಸಿದರು. ಅಡ್ಯಾರ್ ಗಾರ್ಡನ್ ನಲ್ಲಿ ನಡೆದ 2018 ರ ಪಟ್ಲಸಂಭ್ರಮ ದಲ್ಲಿ ದುಬಾಯಿಯ ಮಕ್ಕಳ ತಂಡ " ಮೋಹಿನೀ ಏಕಾದಶಿ" ಪ್ರಸಂಗ ಪ್ತದರ್ಶಿಸಿ ಜನಮೆಚ್ಚುಗೆ ಪಡೆಯಿತು. ಇದರ ನೇತೃತ್ವ ವಹಿಸಿದ ಶೆಟ್ಟರು ಧನ್ಯತೆ ಅನುಭವಿಸಿದರು. 

ಎರಡೆರಡು ಸಲ ದುಬಾಯಿ ತಂಡವನ್ನು ಒಮಾನ್ ರಾಷ್ಟ್ರದ ಮಸ್ಕತ್ ಸಿಟಿಗೆ ಕರೆದೊಯ್ದು ಒಮ್ಮೆ "ಭಕ್ತ ಪ್ರಹ್ಲಾದ_ಇಂದ್ರಜಿತು" ಹಾಗೂ ಇನ್ನೊಮ್ಮೆ " ಮಣಿಕಂಠ ಮಹಿಮೆ" ಪ್ರದರ್ಶನ ಸಂಘಟಿಸಿದ ಘನಕೀರ್ತಿ ಶ್ರೀಯುತ ರದ್ದು. 2017ರಲ್ಲಿ " ಯಕ್ಷಗಾನ ಅಭ್ಯಾಸ ತರಗತಿ" ಯ ಮೂಲಕ " ಸಾಧನಾ ಸಂಭ್ರಮ 2017‛ ಎಂಬ ವಿನೂತನ ಪ್ರಯೋಗ ಮತ್ತು ‚ಪಟ್ಲ ಸಂಭ್ರಮ 2019 ಸಂಯೋಜಿಸುವ ಮೂಲಕ ದುಬಾಯಿಯಲ್ಲಿ ‚ಯಕ್ಷಗಾನ ಅಭ್ಯಾಸ ತರಗತಿ‛ ಸಂಸ್ಥೆಯ ಹೆಸರು ಮನೆಮಾತಾಯಿತು. ಪೂರ್ಣ ಪ್ರಮಾಣದ ಪ್ರದರ್ಶನ ಕೊಡುವಷ್ಟು ಸಂಖ್ಯೆ ಮತ್ತು ಕೌಶಲ್ಯ ಹೊಂದಿದ ಪ್ರತಿಭಾವಂತ ಮಕ್ಕಳ ತಂಡವೇ ಸಿದ್ಧ ವಾಯಿತು.


ಯಕ್ಷಧ್ರುವ ಪಟ್ಲ ಪೌಂಡೇಷನ್ ಇದರ ದುಬಾಯಿ ಘಟಕದ ಕೋಶಾಧಿಕಾರಿಯೂ ಆಗಿರುವ ಶ್ರೀಯುತ ದಿನೇಶ ಶೆಟ್ಟರು ಈ ವರ್ಷ ಅಕ್ಟೋಬರ್ 18 ರಂದು ದುಬಾಯಿಯ ಶೇಖ್ ರಶೀದ್ ಆಡಿಟೋರಿಯಂ ನಲ್ಲಿ ಪಟ್ಲ ಸಂಭ್ರಮ 2019
ಮತ್ತು ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ವಿದ್ಯಾರ್ಥಿಗಳು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ " ಮಹಿಷಮರ್ದಿನಿ ಜಗಜ್ಜನನಿ" ಯ ಹೊಣೆಹೊತ್ತು ನಿರ್ವಹಿಸಿ ಸಂಘಟನಾ ಚತುರಾನನರೆನಿಸಿಕೊಂಡಿದ್ದಾರೆ.


ಕನ್ನಡ ಚಿತ್ರರಂಗದ ಮೇರು ನಟ ಪುನೀತ್ ರಾಜಕುಮಾರರ ಉಪಸ್ಥಿತಿ ಮತ್ತು ಹಾಸ್ಯವೈಭವವೇ ಮೊದಲಾದ ಹಲವು ಪ್ರಥಮಗಳ 
ಜೊತೆ ಕಾರ್ಯಕ್ರಮ ಸಂಘಟಿಸಿ ಯಶಸ್ಸು ಕಂಡಿದ್ದಾರೆ.


ಯಕ್ಷಗಾನ ದ ಪಿತಾಮಹ ಪಾರ್ತಿಸುಬ್ಬನ ಕುಂಬಳೆ- ಕಣಿಪುರ ಸಂಜಾತೆ ಆರತಿ ಎಂಬ ಸದ್ಗೃಹಿಣಿಯ ಜೊತೆ ತನ್ನಿಬ್ಬರು ಮಕ್ಕಳು ಅದಿತಿ, ಆದಿತ್ಯರ ಜೊತೆ ಸಂತೃಪ್ತ ಜೀವನ ನಡೆಸುತ್ತಿರುವ ಶೆಟ್ಟರು ತನ್ನ ಹುಟ್ಟೂರಿನ ಶ್ರೀ ರಾಮ 
ಮಂದಿರದ ಪ್ರತಿಷ್ಠಾಪನಾ ದಿನಾಚರಣೆಯಂದು ಪ್ರತೀವರ್ಷ ವೈದ್ಯಕೀಯ ಶಿಬಿರ, ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಹಾಯಧನ ಮುಂತಾದ ಸಮಾಜಮುಖಿ ಕಾರ್ಯಗಳನ್ನೂ ನಡೆಸುತ್ತಿದ್ದಾರೆ. 

ಇವರ ಮುತುವರ್ಜಿಯಿಂದ ಅನೇಕ ಅಶಕ್ತ ಕಲಾವಿದರಿಗೆ ದ್ಯಾಟ್‌ನ ಎಲ್ಲರ ಸಹಾಯ ಸಹಕಾರ ಪಡೆದು ಸಹಾಯಧನ ನೀಡಲಾಗಿದೆ. ಕೊರೋನ ಸಂದರ್ಭದ ಸಹಕಾರಕ್ಕೂ ಕಾರ್ಯ ಯೋಜನೆಗಳು ಸಿದ್ಧವಾಗುತ್ತಿವೆ.

ಕಟೀಲು ಶ್ರೀದುರ್ಗಾಪರಮೇಶ್ವರಿ ಶ್ರೀಯುತರಿಗೆ ಸಕಲ ಐಶ್ವರ್ಯ ಭಾಗ್ಯಾದಿಗಳನ್ನಿತ್ತು ಇನ್ನಷ್ಟು ಕಲಾಕೈಂಕರ್ಯವನ್ನು ಶ್ರೀಯುತ ದಿನೇಶ ಶೆಟ್ಟಿಯವರಿಂದ ಮಾಡಿಸಲೆಂದು ಪ್ರಾರ್ಥನೆ.


                      ಅಂಕಣ ನಿರ್ವಹಣೆ: 


                             ವಿಜಯ ಕುಮಾರ್ ಶೆಟ್ಟಿ ಯುಎಇ


ದುಬಾಯಿಯ ಯಕ್ಷಗಾನ ಅಭ್ಯಾಸ ತರಬೇತು ಸಂಘಟನೆ DYAT ಬಗ್ಗೆ ಹೆಚ್ಚಿನ ವಿವರಗಳು ಈ ಕೆಳಗಿನ ಲಿಂಕ್ ಸರಣಿಯಲ್ಲಿದೆ. ಲಿಂಕ್ ಒತ್ತಿ ವೀಕ್ಷಿಸಿ.

  

⏩ ಲೇಖನ|-1 https://visheshachannel.blogspot.com/2021/05/dyat.html


▶️  _ಲೇಖನ-2 https://visheshachannel.blogspot.com/2021/05/dyat_20.html


▶️  _ಲೇಖನ-3 https://visheshachannel.blogspot.com/2021/05/dyat-3-27.html


▶️  _ಲೇಖನ-4 https://visheshachannel.blogspot.com/2021/06/dyat-4.html



Post a Comment

0 Comments